ಹೊನ್ನಾವರದಲ್ಲಿ ಎಗ್ಗಿಲ್ಲದೇ ಸಾಗಿದ ಅಕ್ರಮ ಮರಳು ಮಾಫಿಯಾ – ಐದು ಬರಾಸ್ ಅಕ್ರಮ ಮರಳು ಲಾರಿ ಬಿಟ್ಟು ಚಾಲಕ ಪರಾರಿ

ಹೊನ್ನಾವರದಲ್ಲಿ ಎಗ್ಗಿಲ್ಲದೇ ಅಕ್ರಮ ಮರಳು ಮಾಫಿಯಾ ನಡೆಯುತ್ತಿದೆ. ಹಳದಿಪುರದಲ್ಲಿ ಅಕ್ರಮ ಮರಳು ತುಂಬಿಸಿಕೊಂಡು ಹೋಗ್ತಿದ್ದ ಲಾರಿ ಚಾಲಕನೊಬ್ಬ, ಪೊಲೀಸರನ್ನು ನೋಡಿ ಲಾರಿ ಬಿಟ್ಟು ಪರಾರಿಯಾದ ಘಟನೆ ನಡೆದಿದೆ ತಾಡಪಲ್ ಹೊದಿಕೆಯಲ್ಲಿ ಮರೆಯಾಗಿರೋ ಲೋಡ್ ಗಟ್ಟಲೆ ಮರಳು… ಠಾಣೆ ಎದುರು ಪೊಲೀಸರ ವಶದಲ್ಲಿರೋ ಲಾರಿ‌… ಈ ದ್ರಶ್ಯ ಕಂಡು ಬಂದಿದ್ದು ಹೊನ್ನಾವರ ಪೊಲೀಸ್ ಠಾಣೆ ಆವರಣದಲ್ಲಿ. ಹೌದು, ಯಾವುದೇ ಪಾಸ್ ಪರ್ಮಿಟ್ ಇಲ್ಲದೆ ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ವಾಹನ ವಶಕ್ಕೆ ಪಡೆದಿದ್ದು, ಚಾಲಕ ಪರಾರಿ ಆಗಿದ್ದಾನೆ. ರಾಷ್ಟ್ರೀಯ ಹೆದ್ದಾರಿ 66ರ ಕರ್ಕಿ, ಹಳದೀಪುರದಲ್ಲಿ ರಸ್ತೆಯಲ್ಲಿ ಪಿಎಸೈ ಸಾವಿತ್ರಿ ನಾಯಕ ಅವರು ಗಸ್ತು ಕರ್ತವ್ಯದಲ್ಲಿದ್ದಾಗ, ಕರ್ಕಿ ಕೋಣಕಾರದ ಶ್ರೀಕುಮಾರ ಪೆಟ್ರೋಲ್ ಬಂಕ್‌ ಹತ್ತಿರ ವಾಹನ ಚಾಲಕ ತನ್ನ ಲಾರಿಯಲ್ಲಿ ಮರಳನ್ನು ತುಂಬಿಕೊಂಡು ಕುಮಟಾ ಕಡೆಗೆ ಹೋಗುತ್ತಿದ್ದ ಎನ್ನಲಾಗಿದೆ. ಈ ವೇಳೆ ಪೊಲೀಸ್ ಜೀಪನ್ನು ನಿಲ್ಲಿಸಿ ಪಿಎಸೈ ಹಾಗೂ ಸಿಬ್ಬಂದಿಗಳು, ಕೈಸನ್ನೆ ಮಾಡಿದ್ದಾರೆ. ಲಾರಿ ನಿಲ್ಲಿಸಿದ ಚಾಲಕ, ಲಾರಿಯಿಂದ ಇಳಿದು ಕತ್ತಲೆಯಲ್ಲಿ ಓಡಿ ಹೋಗಿದ್ದಾನೆ ಎನ್ನಲಾಗಿದೆ. ಪೊಲೀಸರು ಆತನನ್ನು ಹಿಡಿಯಲು ಪ್ರಯತ್ನಿಸಿದರೂ ಕತ್ತಲಾಗಿದ್ದರಿಂದ ಎಸ್ಕೆಪ್ ಆಗಿದ್ದಾನೆ. ಆದ್ರೆ ಆತ ನಿಲ್ಲಿಸಿ ಬಿಟ್ಟು ಹೋದ ಲಾರಿಯಲ್ಲಿ ಸುಮಾರು 5 ಬರಾಸ್‌ನಷ್ಟು ಕಟ್ಟಡ ನಿರ್ಮಾಣದ ಮರಳು ತುಂಬಿದ್ದು ಕಂಡುಬಂದಿದೆ. ಮರಳನ್ನು ತುಂಬಿಕೊಂಡು ಸಾಗಾಟ ಮಾಡುತ್ತಿದ್ದ ಲಾರಿ ವಾಹನ ಹಾಗೂ ಮರಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತ ಮುಂದಿನ ಕ್ರಮಕ್ಕೆ ತಹಶೀಲ್ದಾರ ಅವರಲ್ಲಿ ನಿವೇದಿಸಿದ್ದಾರೆ. ಅಕ್ರಮ ಮರಳು ಮಾಫಿಯಾ ಎಗ್ಗಿಲ್ಲದೆ ನಡೆಯುತ್ತಿದ್ದು,ಕಡಿವಾಣ ಬೀಳಬೇಕಿದೆ. ಅಪರೂಪಕ್ಕೆಂಬಂತೆ ಒಂದೆರಡು ಪ್ರಕರಣ ಪತ್ತೆಯಾಗುತ್ತೆ ಬಿಟ್ರೆ, ರಾಜಾರೋಷವಾಗಿ ಅಕ್ರಮ ಮರಳು ದಂದೆ ನಡೆಯುತ್ತಿದೆ.