ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಸಭಾಭವನದಲ್ಲಿ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ಖರ್ವಾ ಇದರ ವಾರ್ಷಿಕ ಸರ್ವಸಾಧಾರಣ ಸಭೆ

ಹೊನ್ನಾವರ: ತಾಲೂಕಿನ ಕೊಳಗದ್ದೆಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಸಭಾಭವನದಲ್ಲಿ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ಖರ್ವಾ ಇದರ ವಾರ್ಷಿಕ ಸರ್ವಸಾಧಾರಣ ಸಭೆ ಸಂಘದ ಅಧ್ಯಕ್ಷರಾದ ಈಶ್ವರ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘದ ಮುಖ್ಯ ಕಾರ್ಯನಿರ್ವಾಹಕ ಮೋಹನ ಎಸ್ ನಾಯ್ಕ ವಾರ್ಷಿಕ ವರದಿಯನ್ನು ಪ್ರಸ್ತುತ ಪಡಿಸಿದರು. ಸದಸ್ಯರ ಶೇರು ಬಂಡವಾಳ ₹ 144.90 ಲಕ್ಷ ಆಗಿರುತ್ತದೆ.ಸಂಘದ ಠೇವು ₹562.95 ಲಕ್ಷ. ವರ್ಷಾಂತ್ಯಕ್ಕೆ ಸಂಘದ ನಿಧಿ ₹143.48 ಲಕ್ಷ, ಸಂಘದ ಸದಸ್ಯರುಗಳಿಗೆ ₹704.36 ಲಕ್ಷ ಪೂರೈಸಲಾಗಿದೆ.,₹1171.67 ಲಕ್ಷ ಬರತಕ್ಕ ಸಾಲ ಬಾಕಿ ಇದೆ.ಪ್ರಸಕ್ತ ಸಾಲಿನಲ್ಲಿ ಸಂಘ ವ್ಯಾಪಾರ ವಹಿವಾಟು ನಡೆಸಿ ₹6.30 ವ್ಯಾಪಾರಿ ಲಾಭವನ್ನು ಗಳಿಸಿದೆ.₹20.18ಲಕ್ಷ ನಿವ್ವಳ ಲಾಭ ಗಳಿಸಿದೆ.ಕೇಂದ್ರ ಸರ್ಕಾರದ ಆದೇಶದಂತೆ ಸಹಕಾರ ಸಂಘದ ನಿಭಂದಕರು ಸಮಗ್ರ ಬೈಲಾ ತಿದ್ದುಪಡಿಯ ಪ್ರಕಾರ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ಖರ್ವಾ ಎನ್ನುವುದು ವಿವಿದೊದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ಎಂದು ಮರು ನಾಮಕರಣಗೊಂಡಿದೆ.ಜೊತೆಗೆ ಸಂಘದ ಸದಸ್ಯತ್ವ ಮೊತ್ತವು 1150ಕ್ಕೆ ಏರಿಕೆಯಾಗಿದೆ ಎಂದರು.
ನಂತರ ಸಭೆಯಲ್ಲಿ ಚರ್ಚೆ ಪ್ರಾರಂಭವಾಗಿ ಸಂಘದ ಹೊಸಾಡ ಶಾಖೆ ಆರಂಭವಾಗಿದ್ದರಿಂದ ಸಂಘಕ್ಕೆ ಏನು ಪ್ರಯೋಜನವಾಗಿದೆ ಎಂದು ಸದಸ್ಯ ರಾಮಪ್ಪ ನಾಯ್ಕ ಸಭೆಯಲ್ಲಿ ಪ್ರಶ್ನಿಸಿದರು.ಸಂಘಕ್ಕೆ ಸಾಲ ಮರುಪಾವತಿಯಾಗದೆ ಸದ್ಯ ಮೂರುವರೆ ಲಕ್ಷ ನಷ್ಟವಿದೆ ಎಂದು ಕಾರ್ಯನಿರ್ವಾಹಕ ಮೋಹನ ಎಸ್ ನಾಯ್ಕ ಉತ್ತರಿಸಿದರು.ಸಾಲ ಸಕಾಲಕ್ಕೆ ತುಂಬುವಂತೆ ಸಾಲಗಾರರಿಗೆ ತಿಳಿಹೇಳಲಾಗಿದೆ.ಆದರು ಕೆಲವರು ಸಾಲ ಮರುಪಾವತಿಸದೆ ವಿಳಂಬ ಮಾಡುತ್ತಿದ್ದಾರೆ ಎಂದರು. ಇದಕ್ಕೆ ಸಭೆಯಲ್ಲಿ ಆಕ್ರೋಶ ವ್ಯಕ್ತವಾಗಿ ಸಂಘಕ್ಕೆ ಈ ರೀತಿ ನಷ್ಟ ಉಂಟು ಮಾಡುತ್ತಿರುವ ಹೊಸಾಡ ಶಾಖೆಯನ್ನು ಸ್ಥಗಿತಗೊಳಿಸುವಂತೆ ಸಂಘದ ಕೆಲಸದಸ್ಯರು ಸಲಹೆ ನೀಡಿದರು.ಸಭೆಯಲ್ಲಿದ್ದ ಸಂಘದ ಆಡಳಿತ ಮಂಡಳಿ ಅಧ್ಯಕ್ಷ,ಉಪಾಧ್ಯಕ್ಷರು ಸೇರಿದಂತೆ ನಿರ್ದೇಶಕರು ಸಹ ಜನಾಭಿಪ್ರಾಯಕ್ಕೆ ಒಪ್ಪಿಗೆ ಸೂಚಿಸಿದರು.
ಸಂಘದಿಂದ ಡಿವಿಡೆಂಟ್ ಯಾಕೆ ಕೊಡುತ್ತಿಲ್ಲ ಎಂದು ಶೇರುದಾರ ಸದಸ್ಯ ರಾಧಾಕೃಷ್ಣ ಶಾನ್ಬಾಗ್ ಪ್ರಶ್ನಿಸಿದರು. ಸದಸ್ಯ ಶೇರುಗಳ ಮೇಲೆ ಶೇ.5%ರಂತೆ ಡಿವಿಡೆಂಟ್ ನೀಡಲು ಶಿಫಾರಸ್ಸು ಮಾಡಲಾಗಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಮೋಹನ ನಾಯ್ಕ ತಿಳಿಸಿದರು.ಈ ಮೊತ್ತ ಹೆಚ್ಚಳವಾಗಬೇಕೆಂದು ಶೇರುದಾರ ಸದಸ್ಯರು ಒತ್ತಾಯಿಸಿದರು.ಸಂಘದ ಹಿತ ಕಾಯುವುದು ಸದಸ್ಯರ ಜವಾಬ್ದಾರಿ ಇರುತ್ತದೆ. ನಿಮ್ಮೆಲ್ಲರ ಸಹಕಾರ ಇದ್ದರೆ ಮಾತ್ರ ಸಂಘ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಸಂಘದ ಅಧ್ಯಕ್ಷ ಈಶ್ವರ ಗೌಡ ಹೇಳಿದರು.
ಹಣ ತುಂಬಿ ಯಶಸ್ವಿನಿ ಯೋಜನೆಗೆ ನೊಂದಾಯಿಸಿಕೊಂಡಿದ್ದಾರೆ ವಿನಃ ಕಾರ್ಡ ಕೂಡ ನೀಡಿಲ್ಲ.ಈ ಯೋಜನೆ ಪ್ರಯೋಜನ ಯಾವ ಆಸ್ಪತ್ರೆಯಲ್ಲಿಯು ಸಿಗುತ್ತಿಲ್ಲ.ಈ ಬಗ್ಗೆ ಸರ್ಕಾರದ ಗಮನ ತರುವ ಪ್ರಯತ್ನ ನಿಮ್ಮಿಂದ ಆಗಿದೆಯೋ ಎಂದು ಸದಸ್ಯರಾದ ಸೀತಾರಾಮ ನಾಯ್ಕ,ವೆಂಕಟ್ರಮಣ ನಾಯ್ಕ ಸಭೆಯಲ್ಲಿ ಪ್ರಶ್ನಿಸಿದರು.ಈ ಯೋಜನೆ ಬಗ್ಗೆ ಬಹಳ ಜನರಿಂದ ದೂರುಗಳಿದೆ.ಸರ್ಕಾರ ಮತ್ತು ಆಸ್ಪತ್ರೆ ಮಧ್ಯೆ ಸರಿಯಾದ ಒಪ್ಪಂದ ನಡೆಯದ ಕಾರಣ ಯೋಜನೆ ಸಕ್ರಿಯವಾಗುತ್ತಿಲ್ಲ.ಇದುವರೆಗು ಯಾರಿಗೂ ಯೋಜನೆ ಪ್ರಯೋಜನ ಆಗಿಲ್ಲ ಎಂದು ಸಂಘದ ಕಾರ್ಯನಿರ್ವಾಹಕರು ಉತ್ತರಿಸಿದರು.
ಸೊಸೈಟಿ ಗೆ ತಲುಪುವ ರಸ್ತೆ ಕಚ್ಚಾ ರಸ್ತೆಯಾಗಿದ್ದು ಸಂಚಾರಕ್ಕೆ ಅನಾನುಕೂಲ ಉಂಟಾಗಿದ್ದು, ಸಿಸಿ ರಸ್ತೆ ಅವಶ್ಯಕತೆ ಬಗ್ಗೆ ಮುಖ್ಯಕಾರ್ಯನಿರ್ವಾಹಕ ಮೋಹನ್ ನಾಯ್ಕ ವಿಷಯ ಪ್ರಸ್ತಾಪಿಸಿದರು.ಸಭೆಯಲ್ಲಿದ್ದ ಗ್ರಾಮ ಪಂಚಾಯತ ಅಧ್ಯಕ್ಷ ಶ್ರೀಧರ್ ನಾಯ್ಕ ಅವರು,ಸಚಿವ ಮಂಕಾಳ ವೈದ್ಯರ ಗಮನಕ್ಕೆ ತಂದು ರಸ್ತೆ ಮಂಜೂರಿ ಮಾಡಿಸುವ ಬಗ್ಗೆ ಭರವಸೆ ನೀಡಿದರು.

ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಈಶ್ವರ ಗೌಡ,ಉಪಾಧ್ಯಕ್ಷ ಮಾದೇವ ಹಳ್ಳೇರ,ನಿರ್ದೇಶಕರಾದ ರಾಮ ಗೌಡ,ವಿಶ್ವನಾಥ ಭಟ್ಟ, ಗಜಾನನ ನಾಯ್ಕ, ದೇವಾ ಗೌಡ,ಸೋಮಶೇಖರ್ ನಾಯ್ಕ,ಧರ್ಮ ಗೌಡ,ವೀಣಾ ನಾಯ್ಕ,ಗೌರಿ ಗೌಡ ಉಪಸ್ಥಿತರಿದ್ದರು.