ಭಟ್ಕಳ ಗುರುಕೃಪಾ ಪತ್ತಿನ ಸಹಕಾರಿ ಸಂಘದ 25ನೇ ವರ್ಷದ ವಾರ್ಷಿಕ ಮಹಾಸಭೆ

ಭಟ್ಕಳ : ಆರು ಶಾಖೆಯನ್ನು ಹೊಂದಿರುವ ಗುರುಕೃಪಾ ಪತ್ತಿನ ಸಹಕಾರಿ ಸಂಘ 25 ವರ್ಷಗಳನ್ನು ಪೂರೈಸಿದ್ದು, 2022-23ನೇ ಸಾಲಿನಲ್ಲಿ ಸಂಘ 43.42 ಲಕ್ಷ ರೂಪಾಯಿ ಲಾಭಗಳಿಸಿ ಗ್ರಾಹಕ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಂಘದ ಅಧ್ಯಕ್ಷ ಮೋಹನ ಆರ್ ನಾಯ್ಕ ಹೇಳಿದರು.

ಅವರು  ಪಟ್ಟಣದ ಗೋಪಾಲಕೃಷ್ಣ ದೇವಸ್ಥಾನದ ಸಭಾಭವನದಲ್ಲಿ 25ನೇ ವರ್ಷದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದ ಠೇವುಗಳು ರೂ 31.03 ಕೋಟಿ, ಶೇರು ಬಂಡವಾಳ 1.97 ಕೋಟಿ, ನಿಧಿಗಳು 4.09 ಕೋಟಿ, ದುಡಿಯುವ ಬಂಡವಾಳ 40.42 ಕೋಟಿ, 7.24 ಕೋಟಿ ಗುಂತಾಯಿಕೆ, 34.44 ಕೋಟಿ ಸಾಲ ಸದಸ್ಯರ ಸಾಲವಿದ್ದು, ಈ ಸಲ ಷೇರುದಾರ ಸದಸ್ಯರಿಗೆ ಶೇ. 6 ರಷ್ಟು ಲಾಭಾಂಶ ಹಂಚಲು ನಿರ್ಧರಿಸಲಾಗಿದೆ ಎಂದ ಅವರು ಸಂಘಕ್ಕೆ ಸ್ವಂತ ಕಟ್ಟಡಕ್ಕಾಗಿ ಜಾಗ ಖರೀಧಿಸುವ ಪ್ರಯತ್ನದಲ್ಲಿದ್ದೇವೆ. ಸಂಘ ಆರ್ಥಿಕ ವ್ಯವಹಾರವನ್ನು ಹೊನ್ನಾವರ ತಾಲ್ಲೂಕಿಗೂ ವಿಸ್ತರಿಸಲಿದ್ದು, ಸದ್ಯದಲ್ಲೇ ನಾಜಗಾರದಲ್ಲಿ ಶಾಖೆ ತೆರಯಲಿದ್ದೇವೆ ಎಂದರು. ಸಂಘದಿಂದ ಸಾಲಪಡೆದವರು ಕಟಬಾಕಿ ಮಾಡಿಕೊಳ್ಳದೇ ಸಮಯಕ್ಕೆ ಸರಿಯಾಗಿ ಮರುಪಾವತಿಸಿ ಸಂಘ ದ ಬೆಳವಣಿಗೆಗೆ ಸಹಕಾರ ನೀಡಬೇಕು.ಮುಂದಿನ ದಿನಗಳಲ್ಲಿ ಸಂಘವನ್ನು ಮತ್ತಷ್ಟು ಬೆಳೆಸಲು ನಿರ್ಧರಿಸಿದ್ದು ಇದಕ್ಕೆ ಎಲ್ಲರ ಸಹಕಾರ ಅಗತ್ಯವೆಂದರು. ಸಂಘ 25 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸಂಘದ ಸಂಸ್ಥಾಪಕ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರುಗಳಿಗೆ, ಮಾಜಿ ಮತ್ತು ಹಾಲಿ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ವ್ಯವಸ್ಥಾಪಕರು, ಸಿಬ್ಬಂದಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಮಣ್ಕುಳಿ ಹಿರಿಯ ಪ್ರಾಥಮಿಕ ಶಾಲೆಗೆ ಸಂಘದಿಂದ ಬೇಂಚು, ಡೆಸ್ಕ ವಿತರಿಸಲಾಯಿತು. ಮೂವರು ಮೃತ ಸಾಲಗಾರರ ಸಾಲವನ್ನು ಚುಕ್ತಾ ಪಡಿಸಿ ಪ್ರಮಾಣ ಪತ್ರ ನೀಡಲಾಯಿತು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ನಾರಾಯಣ ನಾಯ್ಕ, ನಿರ್ದೇಶಕರಾದ ಸುರೇಶ ನಾಯ್ಕ, ವೆಂಕಟೇಶ ನಾಯ್ಕ, ರಾಜೇಶ ನಾಯ್ಕ, ಕುಮಾರ ನಾಯ್ಕ,ಹರೀಶ ನಾಯ್ಕ,ಶಭರೀಶ ನಾಯ್ಕ,ಸತೀಶ ನಾಯ್ಕ, ಸುರೇಶ ಮೊಗೇರ, ವಿಜಯಾ ನಾಯ್ಕ, ಭಾರತಿ ನಾಯ್ಕ ಇದ್ದರು..ಪ್ರಧಾನ ವ್ಯವಸ್ಥಾಪಕ ವಾಸುದೇವ ನಾಯ್ಕ ಸ್ವಾಗತಿಸಿ ವರದಿ ವಾಚಿಸಿದರು. ನಿರ್ದೇಶಕ ಜಯಂತ ಗೊಂಡ ವಂದಿಸಿದರು. ಸಭೆಯಲ್ಲಿ ಭಾಗವಹಿಸಿದ ಸದಸ್ಯರು ವಿವಿಧ ಪ್ರಶ್ನೆ ಕೇಳಿ ಅಧ್ಯಕ್ಷರಿಂದ ಉತ್ತರ ಪಡೆದರು.