ಅಂಕೋಲಾ: ಚಾಲಕನ ನಿಯಂತ್ರಣ ತಪ್ಪಿದ ಬಸ್ ಮರಕ್ಕೆ ಡಿಕ್ಕಿ ಹೊಡೆದು ಸುಮಾರು 12 ಪ್ರಯಾಣಿಕರು ಗಾಯಗೊಂಡ ಘಟನೆ ಪಟ್ಟಣದ ಮುಖ್ಯ ಬಸ್ ನಿಲ್ದಾಣದಲ್ಲಿ ಮಂಗಳವಾರ ಮುಂಜಾನೆ ನಡೆದಿದೆ. ಗಾಯಾಳುಗಳನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೆ ಎಸ್ ಆರ್ ಟಿಸಿಯ ಕಾರವಾರ ಘಟಕದ ಬಸ್ ಕಾರವಾರದಿಂದ ಬೆಂಗಳೂರಿಗೆ ಬಸ್ ತೆರಳಬೇಕಿತ್ತು. ಅಂಕೋಲಾ ಮಾರ್ಗವಾಗಿ ತೆರಳುವಾಗ ದಿನಚರ್ಯದಂತೆ ಅಂಕೋಲಾ ಬಸ್ ನಿಲ್ದಾಣಕ್ಕೆ ಬಂದು ವಾಪಸ್ ಶಿರಸಿ ತೆರಳಬೇಕಿತ್ತು. ಚಾಲಕ ಅಂಕೋಲಾ ನಿಲ್ದಾಣದಿಂದ ಬಸ್ ಚಲಾಯಿಸಿ 20-30 ಅಡಿ ದೂರದಲ್ಲಿಯೇ ನಿಯಂತ್ರಣ ತಪ್ಪಿ ಈ ಅವಗಡ ಸಂಭವಿಸಿದೆ. ಬಸ್ ಮರಕ್ಕೆ ಗುದ್ದಿದ ಪರಿಣಾಮ ಬಸ್ಸಿನ ಎಡ ಮುಂಭಾಗ ಜಖಂಗೊಂಡು ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಸುಮಾರು 12 ಪ್ರಯಾಣಿಕರು ಅಂಕೋಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಟ್ಟಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೊಲೀಸ್ ಅಧಿಕಾರಿಗಳು ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಪ್ರೇಮಿಗಳ ಮರ ತಡೆದ ಹೆಚ್ಚಿನ ದುರಂತ.
ಒಂದು ವೇಳೆ ಬಸ್ ನಿಲ್ದಾಣದ ಆವರಣದಲ್ಲಿನ ಮರ ಇಲ್ಲದಿದ್ದಲ್ಲಿ ಬಸ್ ಮರಕ್ಕೆ ಬಡಿಯದೇ ಬಸ್ ನಿಲ್ದಾಣದ ಎದುರಿನ ಗೋಡೆ, ಆಟೋ ನಿಲ್ದಾಣ ಇಲ್ಲವೇ ಕಾಲೇಜು ರಸ್ತೆಗೆ ನುಗ್ಗಿದ್ದರೆ ಹೆಚ್ಚಿನ ಅಪಾಯ ಎದುರಾಗುತ್ತಿತ್ತು ಎನ್ನಲಾಗಿದೆ. ಕಾಲೇಜು ಮತ್ತು ಶಾಲೆಗೆ ತೆರಳುವ ವಿದ್ಯಾರ್ಥಿಗಳು ಸಹ ಈ ಅವಧಿಯಲ್ಲಿ ಬಸ್ ನಿಲ್ದಾಣದಲ್ಲಿಯೇ ಹೆಚ್ಚು ಸಂಚರಿಸುವ ಕಾರಣ ಅಪಾಯದ ತೀವ್ರತೆ ಅಧಿಕವಾಗುತ್ತಿತ್ತು ಎನ್ನಲಾಗಿದೆ. ಒಂದು ಕಾಲದಲ್ಲಿ ಪ್ರಯಾಣಿಕರಿಗೆ ನೆರವು ನೀಡುವ ಮರ ಹಾಗೂ ಹಲವು ಪ್ರೇಮ ಜೀವನಕ್ಕೆ ಸಾಕ್ಷಿಯಾದ ಮರವೆಂದೆ ಜನರ ಪ್ರೀತಿಗೆ ಪಾತ್ರವಾಗಿದ್ದ ಈ ಮರವನ್ನು ಬಸ್ ನಿಲ್ದಾಣದ ಕಾಮಗಾರಿ ವೇಳೆ ಕಡಿದು ತೆರೆವುಗೊಳಿಸುವ ಪ್ರಸ್ತಾಪ ಎದುರಾಗಿದ್ದಾಗ ಹಲವು ಸಂಘಟನೆಗಳು ಮತ್ತು ಸಾಮಾಜಿಕ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು. ಅಂತೂ ಮರ ಉಳಿಸಿದ್ದಕ್ಕೆ ತನ್ನ ಸಾರ್ಥಕತೆ ಮೆರೆದಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ನಿನ್ನೆ ಸಂಭ್ರಮ ಇಂದು ಅಪಘಾತ
ಜಿಲ್ಲೆಯ ಬಸ್ ನಿಲ್ದಾಣಗಳಲ್ಲಿ ಉತ್ತಮ ಬಸ್ ನಿಲ್ದಾಣ ಎನ್ನುವ ಪ್ರಶಸ್ತಿಗಳಿಸಿದೆ ಎಂದು ಅಧಿಕಾರಿಗಳು ನಿನ್ನೆ ಬಸ್ ನಿಲ್ದಾಣದಲ್ಲಿ ಕಾರ್ಯಕ್ರಮ ಸಂಘಟಿಸಿ ಸಂತಸ ಹಂಚಿಕೊಂಡಿದ್ದರು. ಸ್ವಚ್ಚತೆ ಮತ್ತು ಸುರಕ್ಷತೆ ಮಾನದಂಡಗಳ ಆಧಾರದಲ್ಲಿ ಪ್ರಶಸ್ತಿ ಬಂದಿದೆ ಎಂದು ಹೇಳಿಕೊಂಡಿದ್ದರು. ಸ್ವಚತೆಯ ಕೊರತೆಯ ಕಾರಣಕ್ಕೆ ಸುದ್ದಿಯಲ್ಲಿರುವ ಈ ಬಸ್ ನಿಲ್ದಾಣಕ್ಕೆ ಕುರುಡರ ರಾಜ್ಯದಲ್ಲಿ ಒಕ್ಕಣ್ಣು ಇದ್ದವನೆ ರಾಜ ಎನ್ನುವಂತೆ ಆಗಿದೆ ಎನ್ನುವುದು ಹಲವರ ಗುಮಾನಿ.