ದಾಂಡೇಲಿ: ಭಾರತ ದೇಶದಲ್ಲಿ ಜಾರಿಗೊಳಿಸಲಾಗುತ್ತಿರುವ ಏಕರೂಪ ನಾಗರಿಕ ಸಂಹಿತೆ ಕಾನೂನು ಅಲ್ಪಸಂಖ್ಯಾತರ . ವಿರೋಧಿಯಲ್ಲ. ಮಕ್ಕಳ ಮತ್ತು ಮಹಿಳೆಯರ ಆರ್ಥಿಕ ಸಮಾನತೆಗೆ ಜಾರಿಗೊಳಿಸಲಾಗುತ್ತಿದೆ ಎಂದು ಧಾರವಾಡ ಹೈಕೋರ್ಟ್ ಪೀಠದ ನ್ಯಾಯವಾದಿ ಅನೂಪ್ ದೇಶಪಾಂಡೆ ಅಭಿಪ್ರಾಯಪಟ್ಟರು.
ದಾಂಡೇಲಿ ನಗರದ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಸದ್ಭಾವನಾ ಸಮಿತಿ ಮತ್ತು ವಕೀಲರ ಸಂಘ, ದಾಂಡೇಲಿ, ಇವರ ಸಂಯುಕ್ತ ಆಶ್ರಯದಡಿ ಹಮ್ಮಿಕೊಳ್ಳಲಾಗಿದ್ದ ಏಕರೂಪ ನಾಗರಿಕ ಸಂಹಿತೆ ಸಮಾನತೆಯ ಸಮಾಜಕ್ಕಾಗಿ ಎಂಬ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕೆಲವರು ಏಕರೂಪ ನಾಗರಿಕ ಸಂಹಿತೆ ಮುಸ್ಲಿಂ, ಕ್ರೈಸ್ತ ಅಥವಾ ಅಲಸಂಖ್ಯಾತರ ವಿರೋಧಿ ಎಂದು ಬಿಂಬಿಸಲು ಹೋರಟಿದ್ದಾರೆ. ಇದು ಸರಿಯಲ್ಲ, ನಾಗರಿಕ ಸಂಹಿತೆಯನ್ನು ಧಾರ್ಮಿಕ ಸಮಾನತೆಗೆ ದೇಶದಲ್ಲಿ ಜಾರಿಗೊಳಿಸಲಾಗುತ್ತಿಲ್ಲ, ಬದಲಿಗೆ ಮಹಿಳೆಯರ ಮತ್ತು ಮಕ್ಕಳ ಬಗೆಗಿನ ಬೇದಭಾವ ತೊಲಗಿಸುವುದರ ಜೊತೆಗೆ, ಅವರ ಆರ್ಥಿಕ ಸಮಾನತೆಗಾಗಿ ಜಾರಿಗೊಳಿಸಲಾಗುತ್ತಿದೆ. ಏಕರೂಪ ನಾಗರಿಕೆ ಸಂಹಿತೆ ಕೇವಲ ಆರ್ಥಿಕತೆಗೆ ಸಂಬಂಧಿಸಿದ್ದಾಗಿದೆ. ಈ ಕುರಿತು ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಸದ್ಭಾವನಾ ಸಮಿತಿ ಅಧ್ಯಕ್ಷ ತುಕಾರಾಮ ಬಡಿಗೇರ, ವಕೀಲರ ಸಂಘದ ಅಧ್ಯಕ್ಷ ಹನಮಂತ ಕುಲಕರ್ಣಿ ಉಪಸ್ಥಿತರಿದ್ದರು.ನ್ಯಾಯವಾದಿ ಕೋಮಲ ಶಿಂದೆ ಮತ್ತು ತಂಡದವರು ಸ್ವಾಗತ ಗೀತೆ ಹಾಡಿದರು. ನ್ಯಾಯವಾದಿ ವಿಶ್ವನಾಥ ಲಕ್ಷ್ಯಟ್ಟಿ ಸ್ವಾಗತಿಸಿ, ನಿರೂಪಿಸಿದರು.