ಯಲ್ಲಾಪುರ:ಶ್ರೀಮಾತಾ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿಯು ಕಳೆದ ಆರ್ಥಿಕ ವರ್ಷದಲ್ಲಿ 25.39 ಲಕ್ಷ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಜಿ.ಎನ್.ಹೆಗಡೆ ಹಿರೇಸರ ಹೇಳಿದರು.
ಅವರು ಸೋಮವಾರ ಈ ಕುರಿತು ಹೇಳಿಕೆ ನೀಡಿ, ಕಳೆ ವರ್ಷ 86 ಕೋಟಿಗಿಂತ ಹೆಚ್ಚು ವ್ಯವಹಾರ ನಡೆದಿದ್ದು, 15.38 ಲಕ್ಷ ರೂ ಸಾಲ ನೀಡಲಾಗಿದೆ. ಸಹಕಾರಿಯ ಸದಸ್ಯರಿಗೆ ವಿಮೆ, ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಧನ ವಿತರಣೆ, ಕ್ಯಾನ್ಸರ್ ಪೀಡಿತರಿಗೆ ಅನುಕಂಪ ಪರಿಹಾರ ಇತರ ಸೌಲಭ್ಯಗಳನ್ನೂ ನೀಡಲಾಗುತ್ತಿದೆ. ಪ್ರಸಕ್ತ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆ ಸೆ.16 ರಂದು ಬೆಳಗ್ಗೆ 10 ಕ್ಕೆ ಉಮ್ಮಚಗಿಯಲ್ಲಿ ನಡೆಯಲಿದೆ ಎಂದರು.
ಸಂಘವು ಪ್ರಸ್ತುತ ದ್ವಿ ದಶಮಾನೋತ್ಸವದ ಸಂಭ್ರಮದಲ್ಲಿದ್ದು, ಈ ಪ್ರಯುಕ್ತ ಸೆ.16 ರಂದು ಮಧ್ಯಾಹ್ನ 2.30 ಕ್ಕೆ ಉಮ್ಮಚಗಿಯ ಪ್ರಧಾನ ಕಚೇರಿ ಆವಾರದಲ್ಲಿ ಸಹಕಾರಿ ಗೋಷ್ಠಿ ಆಯೋಜಿಸಲಾಗಿದೆ. ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಎಂಡಿ ಶರಣೇಗೌಡ ಪಾಟೀಲ, ಜಿಲ್ಲಾ ಸೌಹಾರ್ದ ಸಹಕಾರಿಯ ಅಧ್ಯಕ್ಷ ಕೆ.ವಿ.ನಾಯ್ಕ ಇತರರು ಗೋಷ್ಠಿಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.
ಶಾಸಕರಾದ ಆರ್.ವಿ.ದೇಶಪಾಂಡೆ, ಶಿವರಾಮ ಹೆಬ್ಬಾರ್ ಇತರ ಗಣ್ಯರು ಭಾಗವಹಿಸಲಿದ್ದಾರೆ. ಸಂಸ್ಥಾಪಕ ಸದಸ್ಯರಿಗೆ ಸನ್ಮಾನ, ಉತ್ತಮ ಗ್ರಾಹಕರಿಗೆ ಗೌರವಾರ್ಪಣೆ, ವಿದ್ಯಾರ್ಥಿ ಪ್ರೋತ್ಸಾಹಧನ ವಿತರಣೆ ಕಾರ್ಯಕ್ರಮ ನಡೆಯಲಿದೆ. ನಂತರ ಸ್ವರ್ಣವಲ್ಲೀ ಮಾತ್ರವೃಂದದವರಿಂದ ಭಜನಾಮೃತ, ಸುದರ್ಶನ ಯಕ್ಷಕಲಾ ಬಳಗ ಉಮ್ಮಚಗಿ ಮಹಿಳೆಯರಿಂದ ದಕ್ಷಯಜ್ಞ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದರು.