ಅಂಕೋಲಾ : ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಮತ್ತು ಗೋಖಲೆ ಸೆಂಟಿನರಿ ಕಾಲೇಜಿನ ಸಹಯೋಗದಲ್ಲಿ ಶೈಕ್ಷಣಿಕ ಕ್ರಾಂತಿಯ ಹರಿಕಾರ ಡಾ.ದಿನಕರ ದೇಸಾಯಿಯವರ ಜನ್ಮದಿನವನ್ನು ಜಿ ಸಿ ಕಾಲೇಜಿನ ಆವಾರದಲ್ಲಿ ಆಚರಿಸಲಾಯಿತು. ಕಸಾಪ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಮತ್ತು ಪ್ರಾಚಾರ್ಯ ಡಾ.ಎಸ್.ವಿ.ವಸ್ತ್ರದ ದಿನಕರ ದೇಸಾಯಿಯವರ ಪುತ್ಥಳಿಗೆ ಮಾಲಾರ್ಪಣೆಗೈದು ಪುಷ್ಪನಮನ ಗೌರವ ಸಲ್ಲಿಸಿದರು. ಈ ವೇಳೆ ಗೋಪಾಲಕೃಷ್ಣ ನಾಯಕ ಮಾತನಾಡಿ ದಿನಕರ ದೇಸಾಯಿಯವರು ಉತ್ತರ ಕನ್ನಡ ಜಿಲ್ಲೆಯ ಅಮೂಲ್ಯ ರತ್ನ, ಅವರನ್ನು ಪಡೆದ ಈ ಜಿಲ್ಲೆಯ ಜನ ಭಾಗ್ಯವಂತರು. ಅವರ ತ್ಯಾಗ ಮತ್ತು ಸೇವಾ ಮನೋಭಾವನೆಯಿಂದ ಹುಟ್ಟಿದ ಶಿಕ್ಷಣ ಸಂಸ್ಥೆಗಳಿಂದ ಈ ಜಿಲ್ಲೆಯ ಜನ ಶೈಕ್ಷಣಿಕವಾಗಿ ಗುರುತಿಸಿಕೊಳ್ಳುವಂತಾಗಿದೆ. ರೈತರ, ದೀನ ದಲಿತರ, ಕಾರ್ಮಿಕರ ದನಿಯಾಗಿದ್ದ ಅವರು ಕವಿಯಾಗಿ, ಲೇಖಕರಾಗಿ, ಚುಟುಕುಗಳ ಮೂಲಕ ಸಮಾಜದ ಜಾಗೃತಿಗೂ ಕಾರಣರಾದರು ಅವರ ಜನ್ಮದಿನ ಆಚರಿಸುವುದೇ ನಮ್ಮ ಪುಣ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಜಿ ಸಿ ಕಾಲೇಜಿನ ಪ್ರಾಚಾರ್ಯ ಎಸ್ ವಿ ವಸ್ತ್ರದ ಮಾತನಾಡಿ ಡಾ.ದಿನಕರ ದೇಸಾಯಿಯವರ ಜನ್ಮದಿನವನ್ನು ಕಾಲೇಜಿನಲ್ಲೇ ಆಚರಿಸಬೇಕೆಂಬ ಬಯಕೆಗೆ ಸ್ಪಂದಿಸಿದ ಕಸಾಪ ಘಟಕವನ್ನು ಅಭಿನಂದಿಸಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿ ಹಿಂದಿನ ಗತವೈಭವ ಮತ್ತೆ ಮರುಕಳಿಸುವಂತಾಗಬೇಕು ಎಂದರು.
ಇದೇ ವೇಳೆ ಡಾ.ಆರ್ ಜಿ ಗುಂದಿಯವರು ಮಾತನಾಡಿ ಈ ಕಾಲೇಜಿನ ವಿದ್ಯಾರ್ಥಿಗಳಿಂದ ಕವನಗಳನ್ನು ಮತ್ತು ದಿನಕರ ದೇಸಾಯರ ಕುರಿತು ಪ್ರಬಂಧಗಳನ್ನು ರಚಿಸಿ ಉತ್ತಮವಾದುದನ್ನು ಆಯ್ಕೆ ಮಾಡಿ ಕಸಾಪ ವತಿಯಿಂದ ಅದನ್ನು ಪುಸ್ತಕದ ರೂಪದಲ್ಲಿ ಹೊರತರವುದಾದರೆ ಅದರ ಸಂಪೂರ್ಣ ಖರ್ಚನ್ನು ತಾವೇ ಭರಿಸುವದಾಗಿ ಘೋಷಿಸಿದರು. ಕಸಾಪ ಕಾರ್ಯದರ್ಶಿ ಜಗದೀಶ ಜಿ ನಾಯಕ ಹೊಸ್ಕೇರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ.ಪ್ರಕಾಶ ನಾಯಕ ವಂದಿಸಿದರು. ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಮತ್ತು ಪದವಿ ವಿದ್ಯಾರ್ಥಿಗಳಿಗಾಗಿ ನಡೆಸಿದ ಚುಟುಕು ವಾಚನ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ಮತ್ತು ಬಹುಮಾನ ವಿತರಿಸಲಾಯಿತು.
ಬಿಕಾಂ ವಿದ್ಯಾರ್ಥಿನಿ ಶ್ರಷ್ಠಿ ನಾಯಕ ದಿನಕರ ದೇಸಾಯರ ಕುರಿತು ಭಾಷಣ ಮಾಡಿದರು. ಬಿಏ ವಿದ್ಯಾರ್ಥಿನಿ ನಿಶಿತಾ ದಿನಕರ ದೇಸಾಯರ ಕುರಿತು ಬರೆದ ಚುಟುಕು ವಾಚಿಸಿದರು.
ಈ ಸಂದರ್ಭದಲ್ಲಿ ಪ್ರೊ ಮೋಹನ ಹಬ್ಬು, ಪ್ರಕಾಶ ಕುಂಜಿ, ಎನ್ ವಿ ರಾಠೋಡ, ಜಯಶೀಲ ಆಗೇರ, ರಫೀಕ ಶೇಖ, ಎಂ ಬಿ ಆಗೇರ, ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ವಿದ್ಯಾಧರ ಮೊರಬ, ಉಪನ್ಯಾಸಕ ವಿ ಎಂ ನಾಯ್ಕ, ಕಾಲೇಜಿನ ಸಿಬ್ಬಂದಿಗಳು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು