ಭಟ್ಕಳ: ತಾಲೂಕಿನಲ್ಲಿ ದಿನದಿಂದ ದಿನಕ್ಕೆ ವಾಹನದ ಸಂಖ್ಯೆಯಲ್ಲಿ ಏರಿಕೆಯಾದಂತೆ ರಸ್ತೆಯಲ್ಲಿ ಬಿಡಾಡಿ ದನಗಳ ಹಾವಳಿಯು ಸಹ ಹೆಚ್ಚಾಗುವದರೊಂದಿಗೆ ವಾಹನ ಸವಾರರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದ್ದು, ಸವಾರರು ಅತೀ ಎಚ್ಚರಿಕೆಯಿಂದ ವಾಹನ ಚಲಾಯಿಸುವಂತಾಗಿದೆ.
ಸದ್ಯ ರಸ್ತೆ ಅಗಲೀಕರಣದ ಬಳಿಕ ಈ ಹಿಂದೆ ಇದ್ದ ದೊಡ್ಡ ದೊಡ್ಡ ಮರಗಳ ನೆರಳಿನಲ್ಲಿ ವಿಶ್ರಮಿಸುತ್ತಿದ್ದ ದನಗಳು ಈಗ ತೆರವಾದ ಮರಗಳ ಜಾಗದಲ್ಲಿ ಹೆದ್ದಾರಿಯ ಅಕ್ಕ ಪಕ್ಕದಲ್ಲಿ ಗುಂಪು ಕಟ್ಟಿಕೊಂಡು ಮಲಗುವುದು ಸರ್ವೇಸಾಮಾನ್ಯವಾಗಿದೆ.
ಇನ್ನು ರಾಷ್ಟಿçÃಯ ಹೆದ್ದಾರಿಯಲ್ಲಿ ವಾಹನ ಓಡಾಟಕ್ಕೆ ಅಡ್ಡಲಾಗಿ ತಿರುಗಾಡುವ ಬಿಡಾಡಿ ದನಗಳು ಹಗಲು ರಾತ್ರಿಯೆನ್ನದೇ ರಸ್ತೆಯಲ್ಲಿಯೇ ಇರುತ್ತವೆ. ಏಕಾಏಕಿ ಮಲಗಿದ್ದ ದನಗಳು ಹೆದ್ದಾರಿಯತ್ತ ಓಡಿ ಬರಲಿದ್ದು ಇದರಿಂದ ವಾಹನ ಸವಾರರು ಅಪಘಾತಕ್ಕೀಡಾಗುತ್ತಾರೆ. ಕೆಲವೊಮ್ಮೆ ದನಗಳಿಗೂ ಭಾರಿ ಗಾತ್ರದ ವಾಹನ ಬಡಿದು ಸಾವನ್ನಪ್ಪುವ ಘಟನೆ ದಿನವೂ ನಡೆಯುತ್ತಿದ್ದರು ಸಹ ಬಿಡಾಡಿ ದನಗಳು ರಸ್ತೆಗೆ ಬಾರದಂತೆ ತಡೆಗಟ್ಟುವ ಕಾರ್ಯ ಮಾತ್ರ ಆಗುತ್ತಿಲ್ಲ.
ಇನ್ನು ಹಳ್ಳಿ ಭಾಗದ ದನಕರುಗಳು ದಿನವೂ ರಸ್ತೆಯಲ್ಲಿಯೇ ಬೀಡಾಡಿ ಸುತ್ತುವುದರಿಂದ ಅಪಘಾತದಲ್ಲಿ ದನಕರುಗಳು ಸಾವನ್ನಪ್ಪಿದರೆ ದನಗಳ ಮಾಲೀಕರು ಯಾರು ಏನು ಎಂಬ ಮಾಹಿತಿ ತಿಳಿಯುದಿಲ್ಲ.ಸದ್ಯ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಜೆಯಾಗುತ್ತಿದಂತೆ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು ಇದು ವಾಹನ ಸವಾರರಿಗೆ ತಲೆನೋವಾಗಿ ಪರಿಣಮಿಸಿದೆ.
ಪಟ್ಟಣ ವ್ಯಾಪ್ತಿಯ ಸಾರ್ವಜನಿಕ ಬೀದಿ, ಮಳಿಗೆಗಳು, ಮುಂಗಟ್ಟು, ಸರಕಾರಿ ಕಚೇರಿ ಆವರಣ ಇತರೆ ಕಡೆಗಳಲ್ಲಿ ಅಲೆಮಾರಿ ಬೀದಿ ದನಗಳು ತಿರುಗಾಡುತ್ತಿವೆ. ಬೀದಿ ಬದಿಯ ಜಾನುವಾರುಗಳಿಂದ ಸಾರ್ವಜನಿಕರು, ಶಾಲಾ ಮಕ್ಕಳು ಮತ್ತು ಪ್ರವಾಸಿಗರ ಓಡಾಟಕ್ಕೆ ಮತ್ತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ ಮತ್ತು ಇವುಗಳಿಂದ ಅಪಘಾತ, ವಾಹನಗಳ ದಟ್ಟಣೆ ಮತ್ತಿತರ ಸಮಸ್ಯೆ ಉದ್ಭವವಾಗುತ್ತಿದೆ.
ಬಹುತೇಕ ಮುಖ್ಯ ರಸ್ತೆಗಳಲ್ಲಿ ಬಿಡಾಡಿ ದನಗಳದ್ದೆ ಹಾವಳಿಯಾಗಿ ಬಿಟ್ಟಿದೆ. ಇವುಗಳ ಹಾವಳಿಯಿಂದಾಗಿ ವಾಹನ ಸವಾರರು ಜೀವ ಭಯದಲ್ಲಿ ವಾಹನಗಳನ್ನು ಚಾಲನೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ದನಗಳು ರಾತ್ರಿ ಹಾಗೂ ಹಗಲಿನಲ್ಲಿ ರಸ್ತೆಯ ಮೇಲೆಯೇ ಇರುವುದರಿಂದ ಅಪಘಾತಗಳು ಕೂಡ ಸಂಭವಿಸಿ ವಾಹನ ಸವಾರರು ಗಾಯಗೊಂಡು, ಜಾನುವಾರುಗಳು ಸಾವನಪ್ಪಿರುವ ಘಟನೆಗಳು ಜರುಗುತ್ತಿವೆ. ಹೀಗಾಗಿ ರಸ್ತೆಗಳ ಅಪಘಾತಗಳ ಸಂಖ್ಯೆ ಏರಿಕೆಯಾಗುವುದಕ್ಕೆ ಬಿಡಾಡಿ ದನಗಳು ಒಂದು ರೀತಿ ಕಾರಣವಾಗಿವೆ.
ತಾಲೂಕಿನ ಸಂಶುದ್ದೀನ್ ಸರ್ಕಲ್ ನಿಂದ ತೆಂಗಿನಗುಂಡಿ ಕ್ರಾಸ್ ತನಕ ಸಂಜೆಯಾದಂತೆ ಬಿಡಾಡಿ ದನಗಳ ಹಾವಳಿ ಹೆಚ್ಚಾಗುತ್ತಿದೆ. ಇತ್ತೀಚಿಗೆ ನಗರ ಭಾಗದಲ್ಲಿಯೇ ಸಾಕಷ್ಟು ದನಗಳು ಅಪಘಾತದಲ್ಲಿಯೇ ಸಾವನ್ನಪ್ಪುತ್ತಿವೆ.
ಮಾಲಕರ ಮೇಲೆ ಪುರಸಭೆ ಕ್ರಮ ವಹಿಸಿ–
ಇನ್ನು ಈ ಬಿಡಾಡಿ ದನಗಳ ಮಾಲೀಕರು ತಮ್ಮ ಜಾನುವಾರುಗಳ ಬಗ್ಗೆ ಕಾಳಜಿ ಇಲ್ಲದೇ ರಸ್ತೆಯಲ್ಲಿಯೇ ಇದ್ದರು ಅದನ್ನು ಮನೆಗೆ ಕರೆದುಕೊಂಡು ಹೋಗುವ ಕೆಲಸ ಮಾಡದ ಹಿನ್ನೆಲೆ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಬಿಡಾಡಿಯಾಗಿ ದನಗಳು ಓಡಾಡುತ್ತವೆ. ರಸ್ತೆ ಸುರಕ್ಷತೆ ಕ್ರಮಕ್ಕೂ, ಸಾರ್ವಜನಿಕ ಹಿತದ್ರಷ್ಟಿ ಹಾಗೂ ಜಾನುವಾರುಗಳ ಜೀವದ ದ್ರಷ್ಟಿಯಿಂದ ಕೂಡ ರಸ್ತೆಯಲ್ಲಿ ಬಿಡಾಡಿಯಾಗಿ ತಿರುಗುವ ದನಗಳಿಂದ ಸಮಸ್ಯೆಗಳನ್ನು ಪುರಸಭೆಯು ಗಮನ ಹರಿಸಿ ಜಾನುವಾರುಗಳ ಮಾಲಕರಿಗೆ ಎಚ್ಚರಿಕೆಯನ್ನು ನೀಡಿದ್ದಲ್ಲಿ ಮಾತ್ರ ಬಿಡಾಡಿ ದನಗಳ ನಿಯಂತ್ರಣ ಸಾಧ್ಯ.
ದನಗಳ್ಳರಿಗೆ ಸಾಗಾಟಕ್ಕೆ ರಹದಾರಿ–
ಬಿಡಾಡಿ ದನಗಳಲ್ಲಿ ಅದರ ಅದೆಷ್ಟು ದನಗಳು ದನಗಳ್ಳರಿಗೆ ಸೂಕ್ತ ಜಾನುವಾರು ಆಗಿದ್ದಲ್ಲಿ ಅದನ್ನು ಹಗಲಿನಲ್ಲಿ ಅದರ ಓಡಾಟ ಗಮನಿಸಿ ರಾತ್ರಿ ವೇಳೆ ಸಾಗಾಟ ಮಾಡುವ ಕೆಲಸವು ಈ ಹಿಂದೆ ನಡೆದಿರುವ ಸಾಕಷ್ಟು ಪ್ರಕರಣವಿದ್ದು ಈಗಲು ಸಹ ಇಂತಹ ಘಟನೆ ಅಲ್ಲಲ್ಲಿ ಕೇಳಿ ಬರುತ್ತಿವೆ. ಇವೆಲ್ಲದಕ್ಕು ನಿಯಂತ್ರಣ ಆಗಬೇಕಾದಲ್ಲಿ ಪೋಲಿಸ ಇಲಾಖೆಯ ನೇತ್ರತ್ವದಲ್ಲಿ ಪುರಸಭೆ ಮಾಲಕರ ಮೇಲೆ ಕ್ರಮಕ್ಕೆ ಮುಂದಾಗಬೇಕಾಗಿದೆ ಇಲ್ಲವಾದಲ್ಲಿ ದನಗಳ್ಳರಿಗೆ ದನಗಳ ಸಾಗಾಟಕ್ಕೆ ರಹದಾರಿಯಾಗಲಿದೆ.