ಕಾರವಾರ: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಜರಾಯಿ ಇಲಾಖೆ ವತಿಯಿಂದ ಜಿಲ್ಲೆಯ ಹಲವು ದೇವಸ್ಥಾನಗಳ ಜೀರ್ಣೋದ್ಧಾರ ಅಭಿವೃದ್ಧಿ ಮತ್ತು ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ವಿಶೇಷ ಅನುದಾನ ಒದಗಿಸಲಾಗಿದ್ದು, ಪೂರ್ಣ ಪ್ರಮಾಣದಲ್ಲಿ ಅನುದಾನ ಬಿಡುಗಡೆಯಾಗದೆ ಕಾಮಗಾರಿ ಅರ್ಧಕ್ಕೆ ನಿಲ್ಲುವಂತಾಗಿದೆ. ಸರ್ಕಾರ ಶೀಘ್ರವೇ ದೇವಸ್ಥಾನಗಳಿಗೆ ಮೀಸಲಾಗಿದ್ದ ಪೂರ್ಣ ಪ್ರಮಾಣದ ಅನುದಾನ ಬಿಡುಗಡೆ ಮಾಡಬೇಕು ಎಂದು ಕಾರವಾರ ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಷ್ ಗುನಗಿ ಆಗ್ರಹಿಸಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮುಜರಾಯಿ ಇಲಾಖೆಯ ವತಿಯಿಂದ ಪುರಾತನ ಮತ್ತು ಪ್ರಸಿದ್ಧಿ ಪಡೆದ ಹಲವು ದೇವಸ್ಥಾನಗಳನ್ನು ಗುರುತಿಸಿ ಅವುಗಳ ಅಭಿವೃದ್ಧಿಗೆ ಕಾರ್ಯಗಳಿಗೆ ಅನುದಾನ ನಿಗದಿಪಡಿಸಿ ಮೀಸಲಿಡಲಾಗಿತ್ತು. ಮೊದಲ ಹಂತದಲ್ಲಿ ಅರ್ಧ ಪ್ರಮಾಣದ ಅನುದಾನ ಒದಗಿಸಿದ್ದ ಕಾರಣ ದೇವಸ್ಥಾನಗಳ ಜೀರ್ಣೋದ್ಧಾರ ಕಾಮಗಾರಿ ನಡೆಸಲು ಚಾಲನೆ ನೀಡಲಾಗಿತ್ತು. ಈಗಾಗಲೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ದೇವಸ್ಥಾನಗಳಲ್ಲಿ ವಿಶಿಷ್ಟ ಧಾರ್ಮಿಕ ಕೈಂಕರ್ಯಗಳನ್ನು ತಾತ್ಕಾಲಿಕವಾಗಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ನಿಲ್ಲಿಸಲಾಗಿದೆ. ಕೆಲವೆಡೆ ದೇವಾಲಯಗಳ ನಿತ್ಯ ಪೂಜೆ ಪುನಸ್ಕಾರಗಳು ನಡೆಸಲು ಸಾಧ್ಯವಾಗುತ್ತಿಲ್ಲ. ಆದಾಗಿಯೂ ರಾಜ್ಯ ಸರ್ಕಾರ ಅನುದಾನ ಒದಗಿಸಲು ವಿಳಂಬ ಮಾಡುತ್ತಿರುವುದು ಖೇದಕರ. ಇತ್ತೀಚಿನ ಮಾಹಿತಿಯ ಪ್ರಕಾರ ಚರ್ಚ್ ಮಸೀದಿ ಮತ್ತು ಬಸದಿಗಳ ನಿರ್ಮಾಣಕ್ಕೆ ಅನುದಾನ ಒದಗಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಾವು ಯಾವುದೇ ಧರ್ಮದ ಧಾರ್ಮಿಕ ಕೇಂದ್ರಗಳಿಗೆ ಅನುದಾನ ನೀಡಬೇಡಿ ಎಂದು ಆಕ್ಷೇಪ ವ್ಯಕ್ತಪಡಿಸುವುದಿಲ್ಲ, ಆದರೆ ನಮ್ಮ ಧಾರ್ಮಿಕ ಕೇಂದ್ರಗಳ ಅದರಲ್ಲಿಯೂ ಅರ್ಧಂಬರ್ಧ ಕಾಮಗಾರಿ ನಡೆಯುತ್ತಿರುವ ದೇವಸ್ಥಾನಗಳಿಗೆ ಮೊದಲು ಅನುದಾನ ಬಿಡುಗಡೆಗೊಳಿಸಿ ಎಂದು ಒತ್ತಾಯಿಸುತ್ತೇವೆ.
ರಾಜ್ಯ ಸರ್ಕಾರ ಹಿಂದುಗಳ ಧಾರ್ಮಿಕ ಭಾವನೆಗಳನ್ನು ಗೌರವಿಸಿ ಅನುದಾನ ಬಿಡುಗಡೆ ಮಾಡಬೇಕು. ಕಾರವಾರ ಅಂಕೋಲಾ ಕ್ಷೇತ್ರದಲ್ಲಿ ರೂಪಾಲಿ ನಾಯ್ಕ ಅವರ ಪ್ರಯತ್ನದಿಂದ ಇದೇ ಮೊದಲ ಬಾರಿಗೆ ಹಲವು ದೇವಸ್ಥಾನಗಳ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಮಂಜೂರಾಗಿದ್ದು, ಕಾಮಗಾರಿ ಹಂತದಲ್ಲಿರುವ ಅವುಗಳಿಗೆ ರಾಜ್ಯ ಸರ್ಕಾರ ಮತ್ತು ಮುಜರಾಯಿ ಇಲಾಖೆಯ ಸಚಿವರು ಮುತುವರ್ಜಿ ವಹಿಸಿ ತಕ್ಷಣ ಅನುದಾನ ಒದಗಿಸಬೇಕು ಎಂದು ಸುಭಾಷ್ ಗುನಗಿ ಆಗ್ರಹಿಸಿದ್ದಾರೆ.