ಅಂಕೋಲಾ : ಶ್ರೀ ನಾರಾಯಣ ಗುರುಗಳು ಒಂದು ಜಾತಿಗೆ ಸೀಮಿತವಾಗದೆ ಹಿಂದುಳಿದ ಜಾತಿಯನ್ನು ಉದ್ಧರಿಸಿದ ಮಹಾನ್ ಕ್ರಾಂತಿ ಪುರುಷ. ಇವರ ತತ್ವ ಆದರ್ಶಗಳನ್ನು ನೆನಪಿಸಿಕೊಳ್ಳಲು ಕೇರಳ ಸರಕಾರ ಮುಕ್ತ ವಿಶ್ವವಿದ್ಯಾಲಯಕ್ಕೆ ಶ್ರೀ ನಾರಾಯಣ ಗುರು ಎಂಬ ಹೆಸರನಲ್ಲಿಟ್ಟಿರುವುದು ಶ್ಲಾಘನೀಯವಾದುದು. ಇಂದಿನ ಯುವ ಜನತೆ ಇಂತಹ ಮಹಾನ್ ವ್ಯಕ್ತಿಗಳ ಬಗ್ಗೆ ತಿಳಿದುಕೊಂಡು ಅವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ಜಿ. ನಾಯಕ ಹೊಸ್ಕೇರಿ ಹೇಳಿದರು.
ಪಟ್ಟಣದಲ್ಲಿ ಕಡಲು ಪ್ರಕಾಶನದ ಆಶ್ರಯದಲ್ಲಿ ಕಳೆದ 10 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಅವರು ಮಾತನಾಡಿದರು
ನಿವೃತ್ತ ಗ್ರಂಥಪಾಲಕ ಮಹಾಂತೇಶ ರೇವಡಿ ಮಾತನಾಡಿ, ನಾರಾಯಣ ಗುರುಗಳ ಕ್ರಾಂತಿಕಾರಿ ಬದಲಾವಣೆಗಳು ಕರ್ನಾಟಕದಲ್ಲಿ ಈಗ ಬೆಳಕಿಗೆ ಬರುತ್ತಿವೆ. ಸರಕಾರಿ ಕಾರ್ಯಕ್ರಮವಾಗಿಯೂ ಆಚರಿಸಲಾಗುತ್ತಿದೆ. ಆದರೆ ನಾರಾಯಣ ಗುರುಗಳ ಅನುಯಾಯಿಗಳು ತಮ್ಮದೇ ರೀತಿಯಲ್ಲಿ ಅವರ ವಿಚಾರ ಧಾರೆಗಳನ್ನು ಪಸರಿಸುತ್ತ ಬಂದಿದ್ದಾರೆ ಎಂದರು.
ಪುರಸಭೆ ಮಾಜಿ ಸದಸ್ಯ ಸಂದೀಪ ಬಂಟ ಮಾತನಾಡಿ, ನಾರಾಯಣ ಗುರುಗಳು 19ನೇ ಶತಮಾನದಲ್ಲಿ ನಡೆಯುತ್ತಿರುವ ಸಾಮಾಜಿಕ ಅಸಮಾನತೆಯನ್ನು ತೊಡೆದು ಹಾಕಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಹಿಂದುಳಿದವರಿಗೆ ಸೂಕ್ತ ಸ್ಥಾನ ಮಾನ ಸಿಗುವಲ್ಲಿ ನಾರಾಯಣ ಗುರುಗಳ ಪಾತ್ರ ಅಪಾರವಾದದ್ದು ಎಂದರು.