ಅಂಕೋಲಾ : ಆಧುನಿಕ ಯುಗದ ಅನ್ವೇಷಣೆಗಳಿಂದ ಮೊಬೈಲ್ ಬಳಕೆಗೆ ಬಂದು ಕ್ರೀಡೆ ಮತ್ತು ಸಾಂಸ್ಕ್ರತಿಕ ಚಟುವಟಿಕೆಗಳು ವಿರಳವಾಗುತ್ತಿವೆ ಎಂದು ಕಾರವಾರದ ಮರೈನ್ ಬಯಾಲಜಿ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ವಿ ಎನ್ ನಾಯಕ ಹೇಳಿದರು.
ಅವರು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಉಪನಿರ್ದೇಶಕರ ಕಛೇರಿ ಕಾರವಾರ ಹಾಗೂ ಗೋಖಲೆ ಸೆಂಟಿನರಿ ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಗೋಖಲೆ ಸೆಂಟೇನರಿ ಕಾಲೇಜಿನಲ್ಲಿ ಆಯೋಜಿಸಿದ್ದ 2023-24 ನೇ ಸಾಲಿನ ತಾಲೂಕಾ ಮಟ್ಟದ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಮೊಬೈಲ್ ಬಳಕೆಯ ಗೀಳಿನಿಂದ ಹೊರ ಬಂದು ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಬೇರೆಯವರ ಪ್ರತಿಭೆಗಳನ್ನೇ ವೀಕ್ಷಿಸುವದರಿಂದ ಪ್ರಯೋಜನವಿಲ್ಲ ತಮ್ಮಲ್ಲಿರುವ ಪ್ರತಿಭೆಯನ್ನೂ ಹೊರತರಬೇಕು. ಮಕ್ಕಳ ಪ್ರತಿಭೆಯನ್ನು ಶಿಕ್ಷಕರು ಮತ್ತು ಪಾಲಕರು ಗುರುತಿಸಿ ಪ್ರೋತ್ಸಾಹಿಸಬೇಕು. ಹೀಗಿದ್ದರೆ ಮಾತ್ರ ಕಲೆಯ ಜೀವಂತಿಕೆಯನ್ನು ಉಳಿಸಬಹುದು ಎಂದರು.
ವಿಶ್ರಾಂತ ಪ್ರಾಚಾರ್ಯ ಮೋಹನ ಹಬ್ಬು ಮಾತನಾಡಿ ಸಾಂಸ್ಕ್ರತಿಕ ಮತ್ತು ಕ್ರೀಡೆಗಳಲ್ಲಿ ಭಾಗವಹಿಸುವದರಿಂದ ಮನಸ್ಸು ಉಲ್ಲಸಿತವಾಗುತ್ತದೆ, ನೆನಪಿನ ಶಕ್ತಿ ಹೆಚ್ಚುತ್ತದೆ, ಉತ್ತಮ ಆರೋಗ್ಯ ಲಭಿಸುತ್ತದೆ. ಮನಸ್ಸು ಉಲ್ಲಸಿತವಾಗಿದ್ದರೆ ಶಿಕ್ಷಣದಲ್ಲಿ ಒಳ್ಳೆಯ ಪ್ರಗತಿಯೂ ಸಾಧ್ಯವಾಗುತ್ತದೆ ಎಂದು ತಿಳಿಸಿ ಡಾ.ದಿನಕರ ದೇಸಾಯಿಯವರ ಸಂಸ್ಥೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದೇಸಾಯಿಯವರು ಬರೆದ ಆತ್ಮವಿಶ್ವಾಸ ಎನ್ನುವ ಪದ್ಯವನ್ನು ಹಾಡಿದರು.
ದಂತ ವೈದ್ಯ ಡಾ.ಕೃಷ್ಣ ಪ್ರಭು ಮಾತನಾಡಿ ಮೊಬೈಲ್ ಬಳಕೆ ಒಳ್ಳೆಯದಕ್ಕಾಗಿ ಮಾತ್ರ ಇರಲಿ, ಅತಿ ಬಳಕೆಯಿಂದ ಕಣ್ಣಿಗೆ, ಮೆದುಳಿಗೆ ಹಾನಿಯಾಗುತ್ತದೆ. ಒಳ್ಳೆಯ ಆಹಾರ, ಒಳ್ಳೆಯ ನಿದ್ರೆಯಿಂದ ಆರೋಗ್ಯವಂತರಾಗಿರಬಹುದು. ಶಿಕ್ಷಣದ ಜೊತೆಗೆ ಸಾಂಸ್ಕ್ರತಿಕ ಚಟುವಟಿಕೆಗಳಲ್ಲೂ ತೊಡಗಿಕೊಂಡು ಉತ್ತಮ ಸಾಧನೆಯನ್ನು ಮಾಡಬಹುದು ಎಂದರು.
ಕೆನರಾ ವೆಲಫರ್ ಟ್ರಸ್ಟನ ಧರ್ಮದರ್ಶಿ ಕೃಷ್ಣಾನಂದ ಶೆಟ್ಟಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿ ಸಿ ಕಾಲೇಜಿನ ಪ್ರಾಚಾರ್ಯ ಡಾ. ಎಸ್ ವಿ ವಸ್ತ್ರದ ಮಾತನಾಡಿದರು.
ಇದೇ ವೇಳೆ ಅತಿಥಿಗಳಾದ ವಿ ಎನ್ ನಾಯಕ, ಡಾ.ಕೃಷ್ಣ ಪ್ರಭು, ಕೃಷ್ಣಾನಂದ ಶೆಟ್ಟಿ ಹಾಗೂ ಪ್ರೊ.ಮೋಹನ ಹಬ್ಬು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ಸುಜಾತಾ ಲಾಡ ಸ್ವಾಗತಿಸಿದರು. ಉಪನ್ಯಾಸಕಿ ಶಿಲ್ಪಾ ಹೊನ್ನೆಕೋಟೆ , ಪಿ ಎಂ ಜ್ಯೂನಿಯರ ಕಾಲೇಜಿನ ಉಪನ್ಯಾಸಕ ಉಲ್ಲಾಸ ಹುದ್ದಾರ ನಿರೂಪಿಸಿದರು. ಉಪನ್ಯಾಸಕಿ ಶ್ರುತಿ ನಾಯ್ಕ ವಂದಿಸಿದರು. ಉಪನ್ಯಾಸಕ ಮೋಹನ ದುರ್ಗೇಕರ ಸಹಕರಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ, ವಿವಿಧ ಕಾಲೇಜುಗಳ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು.