ಹೊನ್ನಾವರ ಶ್ರದ್ದಾ ಭಕ್ತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

ಹೊನ್ನಾವರ : ತಾಲೂಕಿನಾದ್ಯಂತ ಶ್ರದ್ದಾ ಭಕ್ತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು.ಎಲ್ಲೆಡೆ ಸಾಂಪ್ರದಾಯಿಕ ಆಟಗಳು, ಚಿಕ್ಕ ಮಕ್ಕಳಿಗೆ ರಾಧಾ ಕೃಷ್ಣನ ಅಲಂಕಾರ ಮಾಡಿ ನೋಡುವುದೇ ಈ ಒಂದು ಹಬ್ಬದ ವಿಶೇಷ.

ಶ್ರೀ ಕೃಷ್ಣ ಜನ್ಮಾಷ್ಟಮಿ ಎಂದರೆ ಶ್ರೀಕೃಷ್ಣನ ಜನನವನ್ನು ನೆನಪಿಸುವ ಹಬ್ಬವಾಗಿದೆ. ಜೊತೆಗೆ ಹಿಂದೂ ಪಂಚಾಂಗದ ಪ್ರಕಾರ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಅಥವಾ ಶ್ರೀ ಕೃಷ್ಣ ಜನ್ಮೋತ್ಸವವನ್ನು ಆಚರಿಸಲಾಗುತ್ತದೆ.ಗೋಕುಲಾಷ್ಟಮಿ
ದೇಶಾದ್ಯಂತ ಆಚರಿಸಲ್ಪಡುವ ಒಂದು ಪ್ರಮುಖವಾದ ಹಬ್ಬ. ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಎಂದು ಕರೆಯಲಾಗುತ್ತದೆ ಹಾಗೂ ಇದನ್ನು ವೈಭವದಿಂದ ಆಚರಿಸಲಾಗುತ್ತದೆ. ಮನೆ ಮತ್ತು ದೇವಾಲಯಗಳನ್ನು ಸುಂದರವಾಗಿ ಅಲಂಕರಿಸಲಾಗಿತ್ತು. ಕೃಷ್ಣನ ಪುಟ್ಟ ಹೆಜ್ಜೆಗಳನ್ನು ರಂಗೋಲಿಯಲ್ಲಿ ಬರೆದು ಸಂಭ್ರಮಿಸಲಾಗಿತ್ತು. ಕೃಷ್ಣನ ವಿಗ್ರಹಗಳನ್ನು ವಿಧವಿಧವಾಗಿ ಅಲಂಕರಿಸಿ, ಬಗೆಬಗೆಯ ತಿಂಡಿಗಳನ್ನು ಮಾಡಿ ಬಾಲ ಕೃಷ್ಣನನ್ನುಪೂಜಿಸಲಾಗಿತ್ತು. ಕೆಲವು ಕಡೆ,ಈ ಹಿಂದಿನ ಸಂಪ್ರದಾಯದಂತೆ ಮಧ್ಯರಾತ್ರಿಯವರೆಗೆ ಉಪವಾಸವಿದ್ದು, ನಂತರ ಆಹಾರ ಸ್ವೀಕರಿಸಿದರು.ನಗರದ ವಿವಿಧ ಶಾಲೆಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ವಿವಿಧ ಆಟೋಟಗಳನ್ನು ಆಯೋಜಿಸಲಾಗಿತ್ತು. ಎಲ್ಲೆಡೆ ಮಕ್ಕಳು ಕೃಷ್ಣ ರಾಧೆಯರ ವೇಷಭೂಷಣ ತೊಟ್ಟು ಸಂಭ್ರಮಿಸಿದರು. ಬೆಳಗ್ಗೆಯಿಂದ ಸಂಜೆವರೆಗೂ ವಿವಿಧ ಕ್ರೀಡೆಗಳು ನಡೆದವು. ತುಂಟ ಕೃಷ್ಣ ಹಾಗೂ ರಾಧೆ, ರುಕ್ಮಿಣಿಯರ ವೇಷ ತೊಟ್ಟ ಮಕ್ಕಳು ಮುದ್ದುಮುದ್ದಾಗಿ ವೇದಿಕೆ ಮೇಲೆ ಹೆಜ್ಜೆ ಹಾಕಿ ಎಲ್ಲರನ್ನು ರಂಜಿಸಿದರು.ಕೆಲವು ಮನೆಗಳಲ್ಲಿ ಕೃಷ್ಣನ ಹೆಜ್ಜೆಗಳನ್ನು ಬಿಡಿಸಿ, ಮಕ್ಕಳಿಗೆ ವೇಷ ಧರಿಸಿ ಜನರು ಸಂಭ್ರಮಿಸಿದರು. ಗಂಡು ಮಕ್ಕಳಿರುವ ಮನೆ ಕೃಷ್ಣನ ಪುಟ್ಟ ಪಾದಗಳಿಂದ ಸಿಂಗಾರಗೊಂಡಿದ್ದರೆ, ಹೆಣ್ಣು ಮಕ್ಕಳಿರುವ ಮನೆ ರಾಧೆ, ರುಕ್ಮಿಣಿಯರ ಗೆಜ್ಜೆ ಸಪ್ಪಳದಿಂದ ಕೂಡಿತ್ತು. ಕೃಷ್ಣನ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಿತ್ತು. ಬೆಳಗ್ಗೆಯಿಂದಲೇ ವಿಶೇಷ ಪೂಜೆಗಳು ನಡೆದವು. ಗ್ರಾಮೀಣ ಭಾಗದಲ್ಲಿ ಸಂಪ್ರದಾಯಬದ್ದವಾಗಿ ಮಾವಿನ ತೋರಣಗಳನ್ನು ಮಾಡಿ ಶ್ರಂಗರಿಸಿ ಪೂಜೆ ಸಲ್ಲಿಸಿದರು.ಕಡಲೆ ಬೆಲ್ಲದ ಪಾಕದೊಂದಿಗೆ ಮಾಡುವ ಪಂಚಕಜ್ಜಾಯ,ಪನ್ನಿರುಕಾಳು ನೈವೇದ್ಯಕ್ಕಿಡಲಾಗಿತ್ತು.

ಒಟ್ಟಿನಲ್ಲಿ ನಂದಗೋಪನ ಗೋಕುಲಾಷ್ಟಮಿ ವಿಜ್ರಂಭಣೆಯಿಂದ ಆಚರಿಸಲಾಯಿತು