ಕಾರವಾರ: ನಗರದ ಗೀತಾಂಜಲಿ ಚಿತ್ರಮಂದಿರದಿಂದ ಹಬ್ಬವಾಡ ರಸ್ತೆಯ ಅವ್ಯವಸ್ಥೆ ಸರಿಪಡಿಸಿ ವಿದ್ಯುತ್ ದೀಪ ಅಳವಡಿಸುವಂತೆ ಆಗ್ರಹಿಸಿ ಉತ್ತರ ಕನ್ನಡ ಜಿಲ್ಲಾ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ವತಿಯಿಂದ ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿದ ಆಟೋರಿಕ್ಷಾ ಸಂಘದ ಚಾಲಕ ಮಾಲಕರು ರಸ್ತೆಯ ಅವ್ಯವಸ್ಥೆ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಸಂಘಟನೆಯ ಪ್ರಮುಖರು ಮಾತನಾಡಿ ಕಳೆದ ಹದಿನೈದು ವರ್ಷಗಳಿಂದ ನಗರದ ಗೀತಾಂಜಲಿ ಚಿತ್ರಮಂದಿರದ ಎದುರಿನ ಹಬ್ಬವಾಡ ರಸ್ತೆಯ ಅವ್ಯವಸ್ಥೆ ಕುರಿತು ಸರಿಪಡಿಸುವ ಕುರಿತು ಆಗ್ರಹಿಸುತ್ತಲೇ ಬರಲಾಗಿತ್ತು. ಏಕೆಂದರೆ ಈ ರಸ್ತೆಯು ಹೊರ ರಾಜ್ಯಗಳಿಂದ ಕಾರವಾರವನ್ನು ಸಂಪರ್ಕಿಸುವ ಪ್ರಮುಖರಸ್ತೆಯೂ ಆಗಿದೆ. ಕಾರವಾರದ ರೈಲ್ವೆ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರು ಈ ರಸ್ತೆಯ ಮೂಲಕವೇ ಪ್ರಯಾಣಿಸುತ್ತಾರೆ. ದಿನನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಚಲಿಸುತ್ತವೆ. ರೈಲ್ವೆ ನಿಲ್ದಾಣದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದರಿಂದ ದಿನನಿತ್ಯ ನೂರಾರು ಆಟೋ ಚಾಲಕರು ಪ್ರಯಾಣಿಕರನ್ನು ಹೊತ್ತು ಈ ರಸ್ತೆಯಲ್ಲಿ ಚಲಿಸುತ್ತೇವೆ. ಆದಾಗ್ಯೂ ಈ ರಸ್ತೆಯ ಸದ್ಯದ ಅವ್ಯವಸ್ಥೆ ಕಾರವಾರದ ನಾಗರೀಕರಾದ ನಮಗೆ ಮುಜುಗರ ಉಂಟು ಮಾಡಿದೆ. ಈ ರಸ್ತೆಯಲ್ಲಿ ಹಬ್ಬವಾಡದವರಿಗೆ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದ್ದು ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ರಸ್ತೆಯ ಮಧ್ಯದಲ್ಲಿ ದಿವೈಡರ್ ಇಲ್ಲದ ಕಾರಣ ಹಾಗೂ ವಿದ್ಯುತ್ ದೀಪಗಳು ಇಲ್ಲದಿದ್ದರಿಂದ ವಾಹನ ಚಾಲಕರಿಗೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಜಿಲ್ಲಾ ಕೇಂದ್ರದಿಂದ ಅದರಲ್ಲಿಯೂ ಜಿಲ್ಲಾಧಿಕಾರಿ ಕಚೇರಿಯಿಂದ ಕೇವಲ 3-4 ಕಿಲೋಮೀಟರ್ ಹತ್ತಿರದ ರಸ್ತೆಯ ಗತಿಯೇ ಈ ರೀತಿ ದುರವಸ್ಥೆ ಆಗಿದೆ ಎಂದರೆ ಅದು ಆಡಳಿತ ವೈಫಲ್ಯವು ಆಗಿದೆ ಎಂದರು.
ಮುಂದುವರಿದು ಈಗಾಗಲೇ ಹಿಂದಿನ ಶಾಸಕರು ಪತ್ರಿಕಾ ಹೇಳಿಕೆ ಮೂಲಕ ನಗರದ ಗೀತಾಂಜಲಿ ಚಿತ್ರಮಂದಿರದಿಂದ ಹಬ್ಬುವಾಡ ರಸ್ತೆಯ ಅವ್ಯವಸ್ಥೆಯನ್ನು ಸರಿಪಡಿಸಿ ವಿದ್ಯುದ್ದೀಪ ಹಾಗೂ ಚರ೦ಡಿ ನಿರ್ಮಾಣ ಕಾರ್ಯವನ್ನು ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಿ ಜನತೆಗೆ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಹೇಳಿದ್ದರು. ಹಿಂದಿನ ಶಾಸಕರ ಅವಧಿಯಲ್ಲಿ ಹಬ್ಬುವಾಡ ರಸ್ತೆಯ ಡಿವೈಡರ್‌ನಲ್ಲಿ ವಿದ್ಯುತ್ ದೀಪ ಅಳವಡಿಸಲು ಒಟ್ಟೂ 3 ಕೋಟಿ ರೂ.ಗಳ ರಸ್ತೆಯಲ್ಲಿ 27 ಲಕ್ಷ ರೂ. ಇಡಲಾಗಿತ್ತು. ವಿದ್ಯುದ್ದೀಪ ಅಳವಡಿಸಿದಲ್ಲಿ ಈ ರಸ್ತೆಯಲ್ಲಿ ಸಂಚಾರ ಮಾಡುವವರಿಗೆ ಅನುಕೂಲ ಆಗುತ್ತದೆ. ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ರಸ್ತೆ, ಚರಂಡಿ ಹಾಗೂ ವಿದ್ಯುದ್ದೀಪ ಅಳವಡಿಕೆಗೆ ಎಂದೆ ಹಣ ಮಂಜೂರು ಮಾಡಲಾಗಿತ್ತು ಆದಾಗ್ಯೂ ಈಗ ಆ ಹಣ ಎಲ್ಲಿ ಹೋಯಿತು ಎನ್ನುವುದು ತಿಳಿಯುತ್ತಿಲ್ಲ. ಚರಂಡಿ ನಿರ್ಮಾಣದ ಹಣವೂ ಮೀಸಲಾಗಿತ್ತು ಎನ್ನಲಾಗಿದ್ದು ತಾವುಗಳು ಶೀಘ್ರದಲ್ಲಿಯೇ ಹಬ್ಬುವಾಡ ರಸ್ತೆಯ ಅವ್ಯವಸ್ಥೆ ಸರಿಪಡಿಸಿ, ಮುಂದುವರೆದು ಬಾಂಡಿಶಿಟ್ಟಾ ಹಾಗೂ ರೈಲ್ವೆ ನಿಲ್ದಾಣದ ಹೊಂಡಗಳನ್ನು ಮುಚ್ಚಿ ನಗರದ ಮಾನ ಕಾಪಾಡಬೇಕು. ಮುಂದಿನ ದಿನಗಳಲ್ಲಿ ರೈಲ್ವೆ ನಿಲ್ದಾಣದವರೆಗೆ ಸಂಪೂರ್ಣವಾಗಿ ದ್ವಿಪತ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಬೇಕು.15 ದಿನಗಳಲ್ಲಿ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡುತ್ತೇವೆ ಹಾಗೂ ತಪ್ಪಿದ್ದಲ್ಲಿ ಆಟೋ ಚಾಲಕ ಮಾಲಕರು, ವಾಹನ ಚಾಲಕರು ಮತ್ತು ಸಾರ್ವಜನಿಕರ ಸಹಯೋಗದಲ್ಲಿ ಪ್ರಮುಖ ರಸ್ತೆಯನ್ನು ಬಂದ್ ಮಾಡಿ ಉಗ್ರ ಪ್ರತಿಭಟನೆ ನಡೆಸಲು ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಉತ್ತರ ಕನ್ನಡ ಜಿಲ್ಲಾ ಆಟೋರಿಕ್ಷಾ ಚಾಲಕ ಮಾಲಕರ ಸಂಘದ ಪ್ರಮುಖರಾದ ಸುಭಾಷ್ ಗುನಗಿ, ಜಿಲ್ಲಾ ಉಪಾಧ್ಯಕ್ಷ ರೋಷನ್ ಹರಿಕಂತ್ರ, ಜಿಲ್ಲಾ ಕಾರ್ಯದರ್ಶಿ ಗೋಪಾಲ್ ಗೌಡ, ಜಿಲ್ಲಾ ಸಹಕಾರದರ್ಶಿ ರಾಜೇಶ್ ಹರಿಕಂತ್ರ, ಸಂತೋಷ್ ಪೆಡನೇಕರ್, ಸುನಿಲ್ ತಾಂಡೇಲ್ ವಿಠೋಬ ತಾಂಡೇಲ್ ರಾಮಕೃಷ್ಣ, ಶಿವರಾಜ್, ದಿನೇಶ್ ತಾರಿ, ಜ್ಞಾನೇಶ್ವರ್ ಮತ್ತು ಸಂಘದ ಸದಸ್ಯರು ಇದ್ದರು.