ಅಂಕೋಲಾ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅರ್ಥಪೂರ್ಣವಾಗಿ ನಡೆದ ಶಿಕ್ಷಕರ ದಿನಾಚರಣೆ.

ಅಂಕೋಲಾ: ಭಾರತದ ಶ್ರೇಷ್ಠ ದಾರ್ಶನಿಕ ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನದ ಪ್ರಯುಕ್ತ ಅಂಕೋಲಾದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶಿಷ್ಟವಾಗಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು.
ಎಸ್ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು, ಪುಷ್ಪ ನಮನ ಸಲ್ಲಿಸಿದರು. ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ರೇಖಾ ರಾವ್, ರಾಧಾಕೃಷ್ಣನ್ ಅವರ ಚಿಂತನೆಗಳು ಮತ್ತು ಶೈಕ್ಷಣಿಕ ಕ್ಷೇತ್ರದ ಮೇಲಿನ ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ. ದೇಶದೆಲ್ಲೆಡೆ ಶಿಕ್ಷಕರು ಇಂದು ರಾಧಾಕೃಷ್ಣನ್ ಅವರ ಕಾರಣದಿಂದ ಗೌರವವನ್ನು ಪಡೆಯುತ್ತಿದ್ದಾರೆ ಎಂದರು.
ನಂತರ ವಿದ್ಯಾರ್ಥಿಗಳು ಆಯೋಜಿಸಿದ ಶಿಕ್ಷಕ ದಿನಾಚರಣೆಯ ಸಭಾ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಶುಭ ಕೋರಿದರು.
ಶಿಕ್ಷಕ ದಿನಾಚರಣೆಯ ಅರ್ಥಪೂರ್ಣ ಆಚರಣೆಗಾಗಿ ಉಪನ್ಯಾಸಕರ ಪರವಾಗಿ ಮಾತನಾಡಿದ ಹಿರಿಯ ಉಪನ್ಯಾಸಕ ಮಹೇಶ ನಾಯಕ, ವಿದ್ಯಾರ್ಥಿಗಳಿಂದ ಪ್ರೀತಿ ಗೌರವಕ್ಕೆ ಪಾತ್ರರಾಗುವುದು ಶಿಕ್ಷಕನ ಬಹುದೊಡ್ಡ ಆಸ್ತಿಗಳಿಕೆಯಂತೆ. ವಿದ್ಯಾರ್ಥಿ ಸಮುದಾಯದ ಮನ ಗೆಲ್ಲುವುದು ಸುಲಭದ ಮಾತಲ್ಲ ಹಾಗೆಯೇ ಉಪನ್ಯಾಸಕ ಹುದ್ದೆಯು ಅತ್ಯಂತ ಜವಾಬ್ದಾರಿಯುತ ಸ್ಥಾನವಾಗಿದೆ. ದೇಶದ ಭವಿಷ್ಯ ನಿರ್ಮಿಸುವ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಕೊಡುಗೆ ನೀಡುವುದು ಶಿಕ್ಷಕರ ಬಹುದೊಡ್ಡ ಸೇವೆ. ಶಿಕ್ಷಕರಿಗೆ ಗೌರವಪೂರ್ವಕವಾಗಿ ವಿದ್ಯಾರ್ಥಿಗಳು ಆಯೋಜಿಸಿದ ಈ ಕಾರ್ಯಕ್ರಮ ಎಲ್ಲಕ್ಕಿಂತ ಮಿಗಿಲಾದದ್ದು ಎಂದರು.
ಇದೇ ವೇಳೆ ಕಾಲೇಜಿನಲ್ಲಿ ಕಳೆದ ಒಂದು ವರ್ಷದಿಂದ ರಸಾಯನಶಾಸ್ತ್ರ ವಿಭಾಗದಲ್ಲಿ ಅತಿಥಿ ಉಪನ್ಯಾಸಕಿಯಾಗಿ ಮೆಚ್ಚುಗೆಯ ಸೇವೆ ಸಲ್ಲಿಸಿದ ಸುಕನ್ಯಾ ಗೌಡ ಅವರನ್ನು ವಿಜ್ಞಾನ ವಿಭಾಗದಿಂದ ಪ್ರೀತಿಪೂರ್ವಕವಾಗಿ ಗೌರವಿಸಿ ಬಿಳ್ಕೊಡಲಾಯಿತು. ಬೀಳ್ಕೊಡುಗೆ ಕಾರ್ಯಕ್ರಮದ ಕುರಿತು ಉಪನ್ಯಾಸಕ ಪ್ರಮೋದ ಆಚಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಬೀನಾ ನಾಯಕ ಹಾಗೂ ವಿದ್ಯಾರ್ಥಿನಿ ಪ್ರತಿನಿಧಿ ಸಂಜನಾ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು.
ಕಾಲೇಜಿನ ಕಲಾ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಉಪನ್ಯಾಸಕರನ್ನು ಗೌರವಿಸಲು ಕಾರ್ಯಕ್ರಮ ಏರ್ಪಡಿಸಿದ್ದರು. ಸಭಾ ಕಾರ್ಯಕ್ರಮದ ನಂತರ ಕಾಲೇಜಿನ ಉಪನ್ಯಾಸಕರಿಗಾಗಿ ಸಂಗೀತ ಕುರ್ಚಿ, ಸೂಜಿ ದಾರ ಪೋಣಿಸುವಿಕೆ, ಡ್ರಮ್ ಬಾಲ್ ಮತ್ತಿತರ ಮೋಜಿನ ಆಟಗಳನ್ನು ವಿದ್ಯಾರ್ಥಿಗಳು ನಡೆಸಿದರು.
ವಿದ್ಯಾರ್ಥಿ ಪ್ರತಿನಿಧಿಗಳಾದ ನಂದನ ಗೌಡ, ವೆಂಕಟೇಶ್ ನಾಯ್ಕ, ಸಂಜನಾ ನಾಯ್ಕ, ರಕ್ಷಿತಾ ಹರಿಕಂತ್ರ, ಅಭಿಜ್ಞಾ, ಅಭಿಲಾಷ, ದೀಕ್ಷಿತಾ ಗಿರಫ್, ಕಿರಣ್ ಗೌಡ, ಆದರ್ಶ ಗೌಡ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮ ಸಂಘಟಿಸಿದ್ದರು.
ಕಾಲೇಜಿನ ಉಪನ್ಯಾಸಕರಾದ ಜಿ.ಎಸ್ ಗೌಡ, ಜಿಎಂ ನಾಯಕ, ಕವಿತಾ ಎಲ್, ದೀಪಕ ನಾಯ್ಕ, ನಾರಾಯಣ ಗೌಡ, ಶ್ರೀನಿವಾಸ್ ನಾಗರಕಟ್ಟೆ, ಶೋಭಾ ಗೌಡ, ಅನಿತಾ, ವಸಂತ ಗೌಡ ಮತ್ತಿತರರು ಇದ್ದರು.