ದಾಂಡೇಲಿ : ಸಮಾಜದ ಶಾಂತಿ, ಸುವ್ಯವಸ್ಥೆಗೆ ಮಾರಕವಾಗುವುದರ ಜೊತೆಗೆ ಸಮಾಜದ ಆರ್ಥಿಕ, ಸಾಮಾಜಿಕ ಹಿನ್ನಡೆಗೆ ಕಾರಣವಾಗುತ್ತಿರುವ ಕುಡಿತದ ಚಟದಿಂದ ಹೊರಬಂದಾಗ ಮಾತ್ರ ಸಮಾಜ ಸುಧಾರಣೆ ಸಾಧ್ಯ ಎನ್ನುವುದನ್ನು ಅರಿತು ಮುನ್ನಡೆಯಬೇಕು. ವ್ಯಸನ ಮುಕ್ತ ಸಮಾಜ ನಿರ್ಮಾಣವೆ ಶ್ರೀ.ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಶಯವಾಗಿದ್ದು, ಈ ನಿಟ್ಟಿನಲ್ಲಿ ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಜನಜಾಗೃತಿ ವೇದಿಕೆಯ ಮೂಲಕ ವ್ಯಸನಮುಕ್ತ ಸಮಾಜ ನಿರ್ಮಾಣದ ಕಾರ್ಯದಲ್ಲಿ ಸಂಸ್ಥೆ ತನ್ನನ್ನು ತಾನು ತೊಡಗಿಸಿಕೊಂಡಿದೆ ಎಂದು ಶ್ರೀ.ಕ್ಷೇತ್ರ.ಧ.ಗ್ರಾ.ಯೋಜನೆಯ ನಿರ್ದೇಶಕರಾದ ಪ್ರದೀಪ್.ಜಿ.ಶೆಟ್ಟಿಯವರು ಹೇಳಿದರು.
ಅವರು ನಗರದ ಶ್ರೀ ವೀರಭದ್ರೇಶ್ವರ ಸಭಾಭವನದಲ್ಲಿ 1683 ನೇ ಮಧ್ಯವರ್ಜನ ಶಿಬಿರದಲ್ಲಿ ವ್ಯಸನ ಮುಕ್ತರಾದ ನವಜೀವನ ಸಮಿತಿಯ ಸದಸ್ಯರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಜನಜಾಗೃತಿ ವೇದಿಕೆಯ ಧಾರವಾಡ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಭಾಸ್ಕರ್. ಎನ್ ಅವರು ಪ್ರತಿಯೊಬ್ಬ ಮನುಷ್ಯನಿಗೆ ಕೌಟುಂಬಿಕವಾದ ನೆಮ್ಮದಿ ಅತೀ ಅಗತ್ಯ. ಇಡೀ ಕುಟುಂಬದ ನೆಮ್ಮದಿಯನ್ನು ಕೆಡಿಸುವ ಮಧ್ಯ ವ್ಯಸನಗಳಂತಹ ದುಶ್ಚಟಗಳಿಂದ ದೂರ ಉಳಿದು ಕೌಟುಂಬಿಕವಾದ ನೆಮ್ಮದಿಯ ಜೊತೆಗೆ ಸದೃಢ ಸಮಾಜ ನಿರ್ಮಾಣಕ್ಕೆ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು. ಶ್ರೀ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿಯ ಅಧ್ಯಕ್ಷರಾದ ಚನ್ನಬಸಪ್ಪ ಮುರಗೋಡ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು ಶ್ರೀ.ಕ್ಷೇತ್ರ ಧ.ಗ್ರಾ.ಯೋಜನೆಯ ಯೋಜನಾಧಿಕಾರಿ ಶ್ರೀಕಾಂತ್ ನಾಯ್ಕ ಅವರು ಪ್ರಾಸ್ತವಿಕವಾಗಿ ಮಾತನಾಡಿ ನವ ಜೀವನ ಸಮಿತಿಯ ಉದ್ದೇಶವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ನವಜೀವನ ಸಮಿತಿಯ ಪೋಷಕರಾದ ಅನಿತಾ ಮತ್ತು ರೇಣುಕಾ, ದಾಂಡೇಲಿ ಮತ್ತು ಹಳಿಯಾಳ ತಾಲೂಕಿನ ನಾಲ್ಕು ನವ ಜೀವನ ಸಮಿತಿಯ ಸದಸ್ಯರು ಹಾಗೂ ಅವರ ಕುಟುಂಬದ ಸದಸ್ಯರು, ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.