ದಾಂಡೇಲಿ : ನಗರದ ಜೆಎನ್ ರಸ್ತೆಯಲ್ಲಿರುವ ಐಯ್ಯಂಗಾರ್ ಬೇಕರಿಯ ಮುಂಬಾಗದಲ್ಲಿ ಕಳೆದ ಮೂರು ದಿನಗಳ ಹಿಂದೆ ಸಿಕ್ಕಿದ್ದ ಚಿನ್ನದ ಮಾಂಗಲ್ಯ ಸರವನ್ನು ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಐ.ಆರ್.ಗಡ್ಡೇಕರ್ ಅವರ ಸಮ್ಮುಖದಲ್ಲಿ ಅದರ ವಾರಿಸುದಾರರಿಗೆ ನೀಡಿ ಮಾನವೀಯತೆ ಮೆರೆದ ಘಟನೆ ಸೋಮವಾರ ರಾತ್ರಿ ನಡೆದಿದೆ.
ನಗರದ ಜೆ.ಎನ್.ರಸ್ತೆಯ ಸಂಡೆ ಮಾರ್ಕೆಟ್ ಎದುರಿಗಿರುವ ಐಯ್ಯಂಗಾರ್ ಬೇಕರಿಯ ಮುಂಭಾಗ 10 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವೊಂದು ಬೇಕರಿಯ ಮಾಲಕರಾದ ಎಂ.ಬಾಬು ಅವರಿಗೆ ಸಿಕ್ಕಿದೆ. ಕಳೆದ ಮೂರು ದಿನಗಳಿಂದ ಈ ಮಾಂಗಲ್ಯ ಸರದ ಸಂಬಂಧಪಟ್ಟ ವಾರಿಸುದಾರರನ್ನು ಗುರುತಿಸುವ ಕೆಲಸವನ್ನು ಎಮ್.ಬಾಬು ಅವರು ಮಾಡಿದ್ದರು. ಆದರೆ ವಾರಿಸುದಾರರು ಯಾರೆನ್ನುವುದು ತಿಳಿಯದಿದ್ದಾಗ ಚಿನ್ನದ ಮಾಂಗಲ್ಯ ಸರ ಸಿಕ್ಕಿರುವುದರ ಬಗ್ಗೆ ದಾಂಡೇಲಿ ನಗರ ಠಾಣೆಯ ಪಿಎಸ್ ಐ ಐ.ಆರ್.ಗಡ್ಡೇಕರ್ ಅವರಿಗೆ ಮಾಹಿತಿಯನ್ನು ನೀಡಿದ್ದರು.
ಅಂತಿಮವಾಗಿ ಸೋಮವಾರ ರಾತ್ರಿ ಸದ್ರಿ ಚಿನ್ನದ ಮಾಂಗಲ್ಯ ಸರದ ವಾರಿಸುದಾರರಾದ ಸ್ಥಳೀಯ ಮಾರುತಿ ನಗರದ ನಿವಾಸಿ ಸೌಜನ್ಯ ರಾಜೇಶ್ ನಾಯ್ಕ್ ಎಂದು ತಿಳಿದು ಬಂದಿದ್ದು ಅವರನ್ನು ದಾಂಡೇಲಿ ನಗರ ಠಾಣೆಗೆ ಕರೆದು ಪಿಎಸ್ಐ ಐ.ಆರ್.ಗಡ್ಡೇಕರ್ ಅವರ ಸಮ್ಮುಖದಲ್ಲಿ ಚಿನ್ನದ ಮಾಂಗಲ್ಯ ಸರವನ್ನು ನೀಡಲಾಯ್ತು.
ಪಿಎಸ್ಐ ಐ.ಆರ್.ಗಡ್ಡೇಕರ್ ಅವರು ಎಂ.ಬಾಬು ಅವರ ಪ್ರಾಮಾಣಿಕತೆಯನ್ನು ಈ ಸಂದರ್ಭದಲ್ಲಿ ಶ್ಲಾಘಿಸಿದರು.
ಈ ಸಂದರ್ಭದಲ್ಲಿ ತನಿಖಾ ವಿಭಾಗದ ಪಿಎಸ್ಐ ಯಲ್ಲಪ್ಪ.ಎಸ್, ಸಿಬ್ಬಂದಿಗಳಾದ ಮಹಾದೇವ ಬಳೆಗಾರ ಸಿದ್ದರಾಮ್ ರಾಮರಥ್, ಅಶ್ವಿನಿ ಸಾದಿಮಠ, ಆರ್ ಕೆ ಎಂಟರ್ಪ್ರೈಸಸ್ ಮಾಲೀಕರಾದ ಉಬೇದುಲ್ಲಾ ಖಾನ್ ಮೊದಲಾದವರು ಉಪಸ್ಥಿತರಿದ್ದರು.