ಭಟ್ಕಳ: ರಾಜ್ಯ ಮೀನುಗಾರಿಕಾ ಇತಿಹಾಸದಲ್ಲಿಯೇ ಪ್ರಪ್ರಥಮಬಾರಿಗೆ ನಿಗದಿತ ಸಮಯದಲ್ಲಿ, ರಿಯಾಯಿತಿಯ ದರದಲ್ಲಿ ಸಾಂಪ್ರದಾಯಿಕ ಮೊಟರೀಕೃತ ನಾಡದೋಣಿ ಮೀನುಗಾರರಿಗೆ ಕೈಗಾರಿಕಾ ಸೀಮೆಎಣ್ಣೆ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಮೀನುಗಾರಿಕಾ ಮತ್ತು ಬಂದರು ಒಳನಾಡು ಸಚಿವ ಮಂಕಾಳ ವೈದ್ಯ ಹೇಳಿದರು.
ಅವರು ತೆಂಗಿನಗುಂಡಿ ಮೀನುಗಾರಿಕಾ ಬಂದರುನಲ್ಲಿ ರಿಯಾಯಿತಿ ದರದಲ್ಲಿ ಸಾಂಪ್ರದಾಯಿಕ ಮೋಟರಿಕೃತ ನಾಡದೋಣಿ ಮೀನುಗಾರರಿಗೆ ಕೈಗಾರಿಕಾ ಸೀಮೆಎಣ್ಣೆ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೀನುಗಾರರಿಗೆ ಸೀಮೆ ಎಣ್ಣೆ ನೀಡದೆ ಸಂಕಷ್ಟಕ್ಕೆ ದೂಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದ ಕರ್ನಾಟಕ ಸರಕಾರದ ಆದೇಶದಂತೆ ರಾಜ್ಯ ಕರಾವಳಿಯ ಎಲ್ಲಾ ನಾಡದೋಣಿ ಮೀನುಗಾರರ ಸಮಸ್ಯೆ ಬಗೆ ಹರಿಸುವ ನಿಟ್ಟಿನಲ್ಲಿ ಸೀಮೆ ಎಣ್ಣೆ ವಿತರಣೆ ಕಾರ್ಯಕ್ಕೆ ಮುಂದಾಗಿದ್ದೇನೆ. ಪ್ರತಿ ನಾಡದೋಣಿ ಮೀನುಗಾರರಿಗೂ ೩೦೦ ಲಿ. ಕೈಗಾರಿಕಾ ಸೀಮೆ ಎಣ್ಣೆ ದೊರೆಯಲಿದೆ. ರಾಜ್ಯ ಸರ್ಕಾರ ೯೨ಕ್ಕೆ ಖರೀಧಿ ಮಾಡಿ ಮೀನುಗಾರರಿಗೆ ೫೭ಕ್ಕೆ ನೀಡುತ್ತಿದೆ. ಅಂದರೆ ರಾಜ್ಯ ಸರ್ಕಾರ ೩೫ರೂಗಳ ಸಬ್ಸಿಡಿಯನ್ನು ಮೀನುಗಾರರಿಗೆ ನೀಡುತ್ತಿದೆ. ಒಂದ ವೇಳೆ ಕೇಂದ್ರ ಸರ್ಕಾರಕ್ಕೆ ಮೀನುಗಾರರ ಹಿತಕಾಪಾಡುವ ಇಚ್ಚೆ ಇದ್ದರೆ ಮತ್ತಷ್ಟು ದರದಲ್ಲಿ ರಿಯಾಯಿತಿ ದೊರಕುತ್ತದೆ ಎಂದರು.
ಕೈಗಾರಿಕಾ ಸೀಮೆ ಎಣ್ಣೆಯನ್ನು ದೇಶದಲ್ಲೆ ಮೊದಲ ಬಾರಿಗೆ ಕರ್ನಾಟಕ ರಾಜ್ಯದಲ್ಲಿ ನೀಡಿದ ಸರ್ಕಾರ ನಮ್ಮದು. ಹೇಳಿದ ಗ್ಯಾರಂಟಿಗಳನ್ನು ಚಾಚು ತಪ್ಪದೆ ಏಡೇರಿಸಿದ್ದೇವೆ. ಕಳೆದ ಬಾರಿಯ ಮೀನುಗಾರಿಕೆ ಇಲಾಖೆಯಿಂದ ಸಾಕಷ್ಟು ಅನುದಾನ ತಂದರೂ ನಂತರ ಬಂದ ಶಾಸಕ ಅದನ್ನು ಈಡೇರಿಸುವಲ್ಲಿ ಸಂಪೂರ್ಣ ವಿಪಲರಾಗಿದ್ದಾರೆ ಎಂದು ಹೇಳಿದರು.
ನಂತರ ಮೀನುಗಾರರ ಮುಖಂಡ ಸೋಮನಾಥ ಮೊಗೇರ ಮಾತನಾಡಿ ಸಾಂಪ್ರದಾಯಿಕ ಮೀನುಗಾರರು ಹಿಂದುಳಿದ ಮೀನುಗಾರರಾಗಿದ್ದಾರೆ. ಸೀಮೆಎಣ್ಣೆಗೆ ಸಾಕಷ್ಟು ಕಷ್ಟ ಅನುಭವಿಸಿದ್ದೇವೆ. ಕೇಂದ್ರದ ತನಕವೂ ನಿಗಮದ ಮೂಲಕ ಮನವಿ ನೀಡಿದ್ದೇವೆ. ಕಳೆದ ವರ್ಷ ಸೆಪ್ಟೆಂಬರ್ ಅವಧಿಯಲ್ಲಿ ಬರಬೇಕಾಗಿತ್ತು. ಆದರೆ ಬಂದಿಲ್ಲ. ಇದರಿಂದ ಮೀನುಗಾರಿಕೆ ಕಷ್ಟಸಾಧ್ಯವಾಗಿತ್ತು. ಸಚಿವರು ಹೊಸ ಸಾಹಸಕ್ಕೆ ಕೈ ಹಾಕಿ ಮೀನುಗಾರರನ್ನು ಸಂಕಷ್ಟದಿAದ ಪಾರು ಮಾಡಿದ್ದಾರೆ ಎಂದರು.
ಈ ವೇಳೆ ಮೀನುಗಾರಿಕಾ ಸಹಕಾರಿ ಸಂಘ ಜಾಮೀಯಾಬಾದ ಹಾಗೂ ಮೀನುಗಾರಿಕಾ ವಿವಿಧ ಸಂಘ ಸಂಸ್ಥೆಗಳು ಮತ್ತು ಮೀನುಗಾರರಿಂದ ಸಚಿವ ಮಂಕಾಳ ವೈದ್ಯ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಹೇಶ ಕುಮಾರ, ಕೇಶವ ಗೋವಿಂದ ಮೋಗೇರ, ವಿಠ್ಠಲ ದೈಮನೆ, ಜಟ್ಕಾ ದುರ್ಗಪ್ಪ ಮೋಗೇರ ಸೇರಿ ಇತರರು ಇದ್ದರು.