ದಾಂಡೇಲಿ : ನಗರದ ಶ್ರೀ.ದಾಂಡೇಲಪ್ಪ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘಕ್ಕೆ ಜಿಲ್ಲಾ ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾದ ರಮೇಶ್ ಬಗಲಿಯವರು ಇಂದು ಭೇಟಿ ನೀಡಿದರು.
ಶ್ರೀ.ದಾಂಡೇಲಪ್ಪ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಭೇಟಿ ನೀಡಿದ ರಮೇಶ್ ಬಗಲಿಯವರು ಸಂಘದ ವ್ಯವಹಾರ ಮತ್ತು ಲೆಕ್ಕಪತ್ರವನ್ನು ಪರಿಶೀಲನೆ ನಡೆಸಿದರು. ಸಂಘದ ವ್ಯವಹಾರ ಉತ್ತಮವಾಗಿದ್ದು, ನೂರಕ್ಕೆ ನೂರು ಕೃಷಿ ಸಾಲದ ಮೊತ್ತ ಪಾವತಿಯಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು. ಕೃಷಿಯೇತರ ಸಾಲ ಮರುಪಾವತಿಯೂ ನೂರಕ್ಕೆ ನೂರು ವಸೂಲಾತಿಯಾಗಲು ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಸೂಚಿಸಿದರು.
ಸಂಘವು ಕಳೆದ ವರ್ಷ ಪ್ರಾರಂಭಿಸಿರುವ ಸೂಪರ್ ಮಾರ್ಕೆಟ್ ಮಳಿಗೆಯನ್ನು ಇದೇ ಸಂದರ್ಭದಲ್ಲಿ ವೀಕ್ಷಿಸಿದರು. ಸಹಕಾರಿ ಸಂಘಕ್ಕೆ ಜಿಲ್ಲಾ ಕೆಡಿಸಿಸಿ ಬ್ಯಾಂಕ್ ಮತ್ತು ರಾಜ್ಯ ಅಪೆಕ್ಸ್ ಬ್ಯಾಂಕಿನಿಂದ ಸತತವಾಗಿ ಪ್ರಶಸ್ತಿ ಪುರಸ್ಕಾರಗಳು ಬಂದಿರುವುದು ಸಂಘದ ವ್ಯವಹಾರ ಮತ್ತು ನಿರ್ವಹಣೆಯ ಗುಣಮಟ್ಟವನ್ನು ಸೂಚಿಸುತ್ತದೆ. ಸಂಘದ ಕಾರ್ಯನಿರ್ವಾಹಣಾಧಿಕಾರಿಯವರಿಗೆ ಪ್ರತಿಷ್ಟಿತ ಅಜ್ಜಿಬಾಳ ಹೆಗಡೆ ಪ್ರಶಸ್ತಿ ಬಂದಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರಿ ಸಂಘಗಳ ಅಭಿವೃದ್ಧಿ ಅಧಿಕಾರಿ ಸಾಗರ್, ಸಂಘದ ಅಧ್ಯಕ್ಷರಾದ ಅರ್ಜುನ್ ದೇವಪ್ಪ ಮಿರಾಶಿ, ಸಂಘದ ಉಪಾಧ್ಯಕ್ಷರಾದ ಸಂತಾನ್ ಬಸ್ತಾಂವ್ ನಾಯ್ಕ, ಸಂಘದ ನಿರ್ದೇಶಕರುಗಳಾದ ಶಂಕರ ನಾರಾಯಣ ಮಿರಾಶಿ, ಮಾರುತಿ ಗೌಡು ಮಿರಾಶಿ, ಚಂದ್ರಕಾಂತ್ ಪರಶುರಾಮ ಪೂಜಾರಿ, ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೃಷ್ಣ ಪೂಜಾರಿ ಹಾಗೂ ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.