ಅಂಕೋಲಾ: ಸರ್ಕಾರಿ ಪ್ರೌಢಶಾಲೆಯ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಗುರುತಿನ ಚೀಟಿ ವಿತರಣೆ

ಅಂಕೋಲಾ: ವಿದ್ಯಾರ್ಥಿಗಳು ತಮಗೆ ದೊರೆತಿರುವ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು. ಈ ಮೂಲಕ ಸಮಾಜಕ್ಕೆ ಉಪಯುಕ್ತವಾಗುವ ರೀತಿಯಲ್ಲಿ ಪ್ರಜ್ಞಾವಂತ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ಪುರಸಭೆಯ ಮಾಜಿ ಅಧ್ಯಕ್ಷೆ ಶಾಂತಲಾ ನಾಡಕರ್ಣಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಸಮವಸ್ತ್ರ, ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ ಮತ್ತು ಊಟದ ನೆಲಹಾಸು (ಚಾಪೆ) ಗಳನ್ನು ಉಚಿತವಾಗಿ ವಿತರಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಅರುಣ ನಾಡಕರ್ಣಿ ಮಾತನಾಡಿ, ವಿದ್ಯಾರ್ಥಿಗಳು ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು. ಎನ್ಎಸ್ಎಸ್ ಸ್ಕೌಟ್ಸ್ ಗೈಡ್ಸ್ ಇವುಗಳ ಸಹಕಾರದಿಂದ ರಾಷ್ಟ್ರೀಯ ಧೋರಣೆ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸುವ ಹಾಗೂ ತಮ್ಮ ಗಳಿಕೆಯಿಂದ ಸಮಾಜಕ್ಕೆ ಪುನಃ ಕೊಡಗೆ ನೀಡುವ ಮನೋಭಾವನೆ ವಿದ್ಯಾರ್ಥಿಗಳಿಗಿರಬೇಕು. ಸಮಾಜ ಗುರುತಿಸುವಂತಹ ಸಾಧನೆಗಳನ್ನು ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹಕಾರಿ ಧುರೀಣ ಡಿ ಎನ್ ನಾಯಕ ಮಾತನಾಡಿ, ಸೇವೆಗೆ ಮುಡಿಪಾಗಿರುವವರು ಮಾತ್ರ ಸಮಾಜದಲ್ಲಿ ಶಾಶ್ವತವಾಗಿ ಬದುಕುಳಿಯಲು ಸಾಧ್ಯ. ನಾಡಕರ್ಣಿ ದಂಪತಿಗಳ ಸೇವೆ ಶ್ಲಾಘನೀಯ ಎಂದರು.
ಪುರಸಭೆಯ ಸದಸ್ಯೆ ಕರುಣಾ ಮಹಾಲೆ ಎಸ್ ಡಿ ಎಂ ಸಿ ಅಧ್ಯಕ್ಷ ಕೃಷ್ಣಮೂರ್ತಿ ನಾಯಕ ವೇದಿಕೆಯಲ್ಲಿದ್ದರು.
ಪ್ರೌಢಶಾಲೆಯ ಮುಖ್ಯ ಶಿಕ್ಷಕ ಭಾಸ್ಕರ ಗಾಂವಕರ ಸ್ವಾಗತಿಸಿದರು. ಮಂಜುನಾಥ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು. ಹಮ್ಮಣ್ಣ ನಾಯಕ ವಂದಿಸಿದರು. ದಾನಿಗಳ ನೆರವಿನಿಂದ ಸತತವಾಗಿ ಶಾಲೆಯ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಕ್ರಿಯಾಶೀಲ ಮುಖ್ಯ ಶಿಕ್ಷಕ ಭಾಸ್ಕರ ಗಾಂವಕರ ಅವರ ಕಾರ್ಯಕ್ಕೆ ಎಸ್‌ಡಿಎಂಸಿ ಸದಸ್ಯರು ಮತ್ತು ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲೆಯ ಶಿಕ್ಷಕರು, ಸಿಬ್ಬಂದಿ, ಪಾಲಕರು, ಎಸ್ ಡಿ ಎಂ ಸಿ ಸದಸ್ಯರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು