ಅಂಕೋಲಾ: ಇತ್ತೀಚಿಗೆ ತಾಲ್ಲೂಕಿನಲ್ಲಿ ಸದ್ದು ಮಾಡಿದ ಸರಣಿ ದ್ವಿಚಕ್ರ ವಾಹನ ಕಳ್ಳತನ ಮತ್ತು ಮನೆ ಕಳ್ಳತನದ ಆರೋಪಿಗಳನ್ನು ಅಂಕೋಲಾ ಪೋಲಿಸರು ಬಂಧಿಸಿ ಕಳುವಾದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಪಟ್ಟಣದ ಮುಖ್ಯ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ ಬೈಕ್ ಕಳ್ಳತನವಾಗಿರುವ ಕುರಿತು ಮಾಲೀಕ ಬೊಬ್ರುವಾಡದ ಗಣಪತಿ ಶಿವು ನಾಯ್ಕ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ತನಿಖೆ ಕೈಗೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿದ ಕುರಿತು ಸಾಬೀತಾಗಿದೆ.
ಮಂಗಳೂರು ಮೂಲದ ಜೆಸಿಬಿ ಆಪರೇಟರ್ ಮಮ್ಮದ್ ಸಲ್ಮಾನ್ ಗೌಸ್ (23) ಹಾಗೂ ಕಾರವಾರ ಕೋಡಿಭಾಗ ಮೂಲದ ರೋಹಿತ್ ಆನಂದ ಹರಿಜನ್ (21) ಬಂದಿತ ಆರೋಪಿಗಳು.
ತನಿಖೆಯ ವೇಳೆ ಮಹಮ್ಮದ್ ಸಲ್ಮಾನ್ ಗೌಸ್ ಈ ಹಿಂದ್ ಸಿಕ್ಕಿಹಾಕಿಕೊಂಡಿದ್ದ ಆರೋಪಿ ಉಡುಪಿ ಬೈಂದೂರಿನ ರಂಜಿತ್ ಪೂಜಾರಿಯೊಂದಿಗೆ ಸೇರಿ ಪಟ್ಟಣ ವ್ಯಾಪ್ತಿಯ ವಂದಿಗೆಯ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡಿದ್ದಾಗಿ ಹಾಗೂ ಮಹಮ್ಮದ್ ಗೌಸ್ ಮತ್ತು ರೋಹಿತ್ ಹರಿಜನ್ ಇಬ್ಬರೂ ಬಸ್ ನಿಲ್ದಾಣದ ಎದುರಿನಲ್ಲಿ ನಿಲ್ಲಿಸಿದ ಬೈಕ್, ಹಿರೇಗುತ್ತಿಯಲ್ಲಿ ಒಂದು ಮನೆ ಕಳ್ಳತನ ಮತ್ತು ಕಾರವಾರದಲ್ಲಿ ಒಂದು ಬೈಕ್ ಕದ್ದಿರುವುದಾಗಿ ತಿಳಿದು ಬಂದಿದೆ. ಬಂದಿತರಿಂದ ಎರಡು ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮುಂದುವರೆದು ಆರೋಪಿಗಳು ಅಂಕೋಲಾ ತಾಲೂಕಿನ ಶೆಟಗೇರಿ, ಜಮಗೋಡ, ಪುರ್ಲಕ್ಕಿಬೇಣ ಮತ್ತು ವಂದಿಗೆಗಳಲ್ಲಿ ತಲಾ ಒಂದೊಂದು ಮನೆಯಲ್ಲಿ ಕಳ್ಳತನ ನಡೆಸಿರುವುದಾಗಿ ಬಾಯಿಬಿಟ್ಟಿದ್ದಾರೆ.
ಪೊಲೀಸ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್ ನಿರ್ದೇಶನದಲ್ಲಿ ಸಿಪಿಐ ಸಂತೋಷ್ ಶೆಟ್ಟಿ ನೇತ್ರತ್ವದಲ್ಲಿ ಪಿಎಸ್ಐ ಉದ್ದಪ್ಪ ಧರೆಪ್ಪನವರ್ ಹಾಗೂ ಜಯಶ್ರೀ ಪ್ರಭಾಕರ್, ಸಿಬ್ಬಂದಿ ವೆಂಕಟರಮಣ ನಾಯ್ಕ ಶ್ರೀಕಾಂತ ಕಟಬರ, ಆಸಿಫ್ ಕುಂಕೂರು, ಕಿರಣ್ ನಾಯ್ಕ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.