ದಾಂಡೇಲಿಯ ಡಿ.ಎಫ್.ಎ ಮೈದಾನದಲ್ಲಿ ಪ್ರಾಥಮಿಕ ಶಾಲಾ ಮಕ್ಕಳ ಇಲಾಖಾ ಕ್ರೀಡಾಕೂಟ

ದಾಂಡೇಲಿ :  ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಿರಸಿ, ಶೈಕ್ಷಣಿಕ ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಹಳಿಯಾಳ, ಲಯನ್ಸ್ ಇಂಟರ್ ನ್ಯಾಷನಲ್ ಸ್ಕೂಲ್ ದಾಂಡೇಲಿ ಇವರ ಸಂಯುಕ್ತಾಶ್ರಯದಡಿ ನಗರದ ಡಿ.ಎಫ್.ಎ ಮೈದಾನದಲ್ಲಿ ದಾಂಡೇಲಿ ವಲಯ ಮಟ್ಟದ 14 ವರ್ಷ ವಯೋಮಿತಿಯ ಪ್ರಾಥಮಿಕ ಶಾಲಾ ಮಕ್ಕಳ ಇಲಾಖಾ ಕ್ರೀಡಾಕೂಟವನ್ನು ಮಂಗಳವಾರ ಆಯೋಜಿಸಲಾಗಿತ್ತು.

ಕ್ರೀಡಾ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ತಹಶೀಲ್ದಾರ್ ಶೈಲೇಶ್ ಪರಮಾನಂದ ಅವರು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಹಾಗೂ ಸದಢೃ ಆರೋಗ್ಯ ನಿರ್ಮಾಣಕ್ಕೆ ಕ್ರೀಡೆ ಅತೀ ಅವಶ್ಯಕ. ಇಂದು ಶಿಕ್ಷಣ ಇಲಾಖೆ ಕ್ರೀಡಾ ಚಟುವಟಿಕೆಗಳಿಗೆ ವಿಶೇಷವಾದ ಒತ್ತನ್ನು ನೀಡುತ್ತಿದ್ದು, ವಿದ್ಯಾರ್ಥಿಗಳು ಇದರ ಲಾಭವನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ನಗರ ಸಭೆಯ ಪೌರಾಯುಕ್ತರಾದ ಆರ್.ಎಸ್.ಪವಾರ್ ಅವರು ಮಕ್ಕಳ ಸರ್ವತೋಮುಖ ಪ್ರಗತೊಗೆ ಕ್ರೀಡೆ ಮಹತ್ವಪೂರ್ಣವಾಗಿದೆ. ಕ್ರೀಡಾಕೂಟದಲ್ಲಿ ಸೋಲು ಗೆಲುವು ಸಹಜ. ಸೋಲು, ಗೆಲುವನ್ನು ಸಮಾನಚಿತ್ತದಿಂದ ಸ್ವೀಕರಿಸಿ, ಸತತ ಪರಿಶ್ರಮಿಗಳಾಗಿ ಸಾಧನೆಯ ಸಾಧಕರಾಗಬೇಕೆಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ್ ತಿವಾರಿ, ನಗರ ಸಭೆಯ ನಿಕಟಪೂರ್ವ ಅಧ್ಯಕ್ಷೆ ಸರಸ್ವತಿ ರಜಪೂತ್ ಅವರು ಭಾಗವಹಿಸಿ ಶುಭವನ್ನು ಹಾರೈಸಿದರು. ನಗರದ ಹಿರಿಯ ವೈದ್ಯರಾದ ಡಾ.ಎನ್.ಜಿ.ಬ್ಯಾಕೋಡ್ ಅಧ್ಯಕ್ಷತೆಯನ್ನು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕರುಗಳಾದ ಡೇವಿಡ್ ದಾನಂ ಮತ್ತು ಸುರೇಶ್ ನಾಯಕ, ತಹಶೀಲ್ದಾರ್ ಶೈಲೇಶ್ ಪರಮಾನಂದ ಮತ್ತು ಪೌರಾಯುಕ್ತರಾದ ಆರ್.ಎಸ್.ಪವಾರ್ ಅವರುಗಳನ್ನು ಸನ್ಮಾನಿಸಲಾಯ್ತು.

ಲಯನ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಯು.ಎಸ್.ಪಾಟೀಲ್ ಸ್ವಾಗತಿಸಿದರು. ಸೆಂಟ್ ಮೈಕಲ್ ಕಾನ್ವೆಂಟ್ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಸೀತಾರಾಮ ನಾಯ್ಕ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಶಿಕ್ಷಕಿ ಪವಿತ್ರಾ ಮಡಿವಾಳ ವಂದಿಸಿದರು. ಸಿ.ಆರ್.ಪಿ ಲಲಿತಾ ನಾಯ್ಕ ಕಾರ್ಯಕ್ರಮವನ್ನು ನಿರೂಪಿಸಿದರು.