ದಾಂಡೇಲಿ :ಇಳವಾದಲ್ಲಿ ಜಲಸಾಹಸ ಕ್ರೀಡೆಗಳಿಗೆ ಹೆಚ್ಚಿಸಲಾದ ದರವನ್ನು ಕಡಿಮೆಗೊಳಿಸಲು ಪ್ರವೀಣ್ ಕೊಠಾರಿ ಆಗ್ರಹ

ದಾಂಡೇಲಿ : ಜೋಯಿಡಾ ತಾಲೂಕಿನ ಗಣೇಶ ಗುಡಿಯ ಇಳವಾದಲ್ಲಿ ವಿವಿಧ ರೀತಿಯ ಜಲ ಸಾಹಸ ಕ್ರೀಡೆಗಳಿಗೆ ವಿಧಿಸುವ ಪ್ರವೇಶ ಶುಲ್ಕದ ಮೊತ್ತವನ್ನು ಗಣನೀಯ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದ್ದು, ಇದರಿಂದ ಪ್ರವಾಸಿಗರಿಗೆ ಹಾಗೂ ಪ್ರವಾಸೋದ್ಯಮವನ್ನೇ ನಂಬಿ ರೆಸಾರ್ಟ್, ಹೋಂಸ್ಟೇ ನಡೆಸುವವರಿಗೆ ತೀವ್ರ ತೊಂದರೆಯಾಗುತ್ತಿದೆ. ಜಲ ಸಾಹಸ ಕ್ರೀಡೆಗಳನ್ನು ನಡೆಸುವವರು ಮನಸೋ ಇಚ್ಛೆ ಏಕಏಕಿ ಜಲ ಸಾಹಸ ಕ್ರೀಡೆಗಳ ಪ್ರವೇಶಾತಿ ದರವನ್ನು ಹೆಚ್ಚಳ ಮಾಡಿರುವುದು ಸರಿಯಾದ ಕ್ರಮವಲ್ಲ. ಆದ್ದರಿಂದ ಈ ಕೂಡಲೇ ಹೆಚ್ಚಿಸಿದ ದರವನ್ನು ಇಳಿಕೆ ಮಾಡಿ ಈ ಹಿಂದಿನಂತೆ ದರವನ್ನು ನಿಗದಿ ಪಡಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ (ಪ್ರ)ಬಣದ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಪ್ರವೀಣ್ ಕೊಠಾರಿಯವರು ಆಗ್ರಹಿಸಿದ್ದಾರೆ.

ಅವರು ದಾಂಡೇಲಿ ನಗರದಲ್ಲಿ ಮಾಧ್ಯಮದ ಮೂಲಕ ಇಂದು ಜಿಲ್ಲಾಧಿಕಾರಿಯವರಿಗೆ ಮನವಿಯನ್ನು ಮಾಡಿದ್ದು, ಒಂದಾನು ವೇಳೆ ದರ ಇಳಿಕೆ ಮಾಡದೆ ಇದ್ದಲ್ಲಿ ಸಂಘಟನೆಯ ವತಿಯಿಂದ ಉಗ್ರ ಪ್ರತಿಭಟನೆಯನ್ನು ಮಾಡಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಈ ಸಂದರ್ಭದಲ್ಲಿ ಕರವೇ (ಪ್ರ) ಬಣದ ದಾಂಡೇಲಿ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ್ ಪಂತೋಜಿ, ಕಾರ್ಯದರ್ಶಿ ಜಹಾಂಗೀರ್ ಬಾಬಾ ಖಾನ್ ಉಪಸ್ಥಿತರಿದ್ದರು.