ಅಂಕೋಲಾ : ಮಾಹಿತಿ ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣಗಳ ಬೆಳವಣಿಗೆ ಅನಕ್ಷರಸ್ಥರಿಗೆ ವರದಾನವಾಗಿ ಪರಿಣಮಿಸಿದೆ. ಬಳಕೆಯಲ್ಲಿನ ಆಚಾತುರ್ಯದಿಂದ ಅಕ್ಷರಸ್ಥರು ಸಾರ್ವಜನಿಕರ ಮುಂದೆ ತಲೆತಗ್ಗಿಸುವ ಘಟನೆಗಳು ಹಲವು ಬಾರಿ ನಡೆದಿವೆ. ಇದಕ್ಕೆ ಪೂರಕವಾಗಿ ತಾಲೂಕಿನಲ್ಲೊಂದು ವಿಲಕ್ಷಣ ಘಟನೆ ಜರುಗಿದೆ. ಎದುರಿಗಿರುವ ವ್ಯಕ್ತಿಯನ್ನು ಬೆತ್ತಲೆಯಾಗಿ ನೋಡುವ ತೆವಲಿಗೆ ಬಿದ್ದ ವೈದ್ಯನೊರ್ವ ಆನಲೈನ್‌ನಲ್ಲಿ ಕನ್ನಡಕ ಖರೀದಿಸಲು ಮುಂದಾಗಿ 1 ಲಕ್ಷ 87 ಸಾವಿರ ಹಣವನ್ನು ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
ವೈದ್ಯರು 50 ವರ್ಷದ ಆಸುಪಾಸಿನವರು. ಮದುವೆ ವಯಸ್ಸಿನ ಮಕ್ಕಳಿದ್ದರೂ ಇತರೆ ಹೆಣ್ಣು ಮಕ್ಕಳನ್ನು ಬೆತ್ತಲೆಯಾಗಿ ನೋಡುವ ಆಸೆಯಿಂದ ಬರೋಬ್ಬರಿ 1 ಲಕ್ಷ 87 ಸಾವಿರ ರೂ ಹಣವನ್ನು ಆನಲೈನ್‌ನಲ್ಲಿ ಕಳೆದುಕೊಳ್ಳುವಂತೆ ಮಾಡಿದೆ.
ಆನ್‌ಲೈನ್‌ನ ಮೋಸದ ಜಾಲಕ್ಕೆ ಬಿದ್ದ ಈತನಿಗೆ, ಇತ್ತ ಬೆತ್ತಲೆ ಕಾಣುವ ಕನ್ನಡಕವು ಇಲ್ಲದೆ, ಅತ್ತ ತಾನು ಆನ್ಲೈನ್ ಪೇಮೆಂಟ್ ಮಾಡಿದ ಹಣ ಬಾರದೆ ಚಡಪಡಿಸುವಂತಾಗಿದೆ.
ಈ ವೈದ್ಯ ಮಹಾಶಯ ತನಗೆ ಇಷ್ಟ ಬಂದವರನ್ನು ಬೆತ್ತಲೆಯಾಗಿ ನೋಡಬೇಕೆಂದು ಕನ್ನಡಕದ ಶೋಧನೆಗಾಗಿ ಆನಲೈನ್‌ನಲ್ಲಿ ತಡಕಾಡಿದ್ದಾನೆ. ಆನಲೈನ್‌ನಲ್ಲಿ ಈ ಕನ್ನಡಕ ಬಳಸಿದರೆ ಸಂಪೂರ್ಣವಾಗಿ ನ*** ನೋಡಬಹುದು ಎನ್ನುವ ಜಾಹೀರಾತು ಕಂಡಿದ್ದಾನೆ. ಈ ಅಪರೂಪದ ಕನ್ನಡಕ್ಕೆ 7 ಲಕ್ಷ ರೂ ಬೆಲೆ ಇರುವದಾಗಿ, 10 ನಿಮಿಷದೊಳಗೆ ಬುಕ್ಕಿಂಗ್ ಮಾಡಿದರೆ 70 ಶೇ ರಿಯಾಯತಿಯಾಗಿ ಕನ್ನಡಕಕ್ಕೆ ಕೇವಲ 2 ಲಕ್ಷದ 10 ಸಾವಿರ ಆಗುತ್ತದೆ ಎಂದು ಉಲ್ಲೇಖಿಸಲಾಗಿತ್ತು. ಕೂಡಲೆ ಬುಕ್ಕಿಂಗ್ ಹಣವಾಗಿ 83 ಸಾವಿರ ಹಣವನ್ನು ಪೋನ್‌ಪೆ ಮುಖಾಂತರ ಪಾವತಿ ಮಾಡುವಂತೆ ತಿಳಿಸಲಾಗಿತ್ತು. ಇದನ್ನು ನಂಬಿದ ವೈದ್ಯ ಕೂಡಲೆ ತನ್ನ ಖಾತೆಯ ಮುಖಾಂತರ 83 ಸಾವಿರ ರೂ ಹಣವನ್ನು ಸಂದಾಯ ಮಾಡಿದ್ದಾನೆ.
ಸಂದಾಯ ಮಾಡಿದ 15 ನಿಮಿಷದಲ್ಲಿ 23 ಸಾವಿರ ವಾಪಸ್ ವೈದ್ಯನ ಖಾತೆಗೆ ಮರು ಜಮಾವಣೆ ಆಗಿ, ನಿಮಗೆ ಶುಭಾಷಯಗಳು, ಲಕ್ಕಿ ಡ್ರಾನಿಂದ ನಿಮಗೆ 23 ಸಾವಿರ ಹಣ ಲಭ್ಯವಾಗಿದೆ. ಉಳಿದ ಹಣವನ್ನು ಕೂಡಲೆ ಜಮಾ ಮಾಡಿ ಕನ್ನಡವನ್ನು ಪಡೆಯಿರಿ ಎಂದು ಪೋನ್ ಮುಖಾಂತರ ತಿಳಿಸಲಾಗಿತ್ತು. ತನ್ನ ಖಾತೆಗೆ 23 ಸಾವಿರ ಹಣ ಮರು ಪಾವತಿಯಾದನ್ನು ಕಂಡು ಹರ್ಷಿತನಾದ ವೈದ್ಯ, ಬಾಕಿ ಭರಣ ಮಾಡಬೇಕಾಗಿದ್ದ 1 ಲಕ್ಷದ 27 ಸಾವಿರ ರೂ ಹಣವನ್ನ ಹಿಂದೆ ಮುಂದೆ ಯೋಚನೆ ಮಾಡದೆ ಒಮ್ಮೆಲೆ ಅವರ ಖಾತೆಗೆ ಜಮಾ ಮಾಡಿದ್ದಾನೆ.
ಇತ್ತ ಕನ್ನಡಕ್ಕಾಗಿ ನಿದ್ದೆ ಬಿಟ್ಟು 4 ದಿನ ವೈದ್ಯ ಕಾದು ಕುಳಿತಿದ್ದಾನೆ. ಆದರೆ ಕನ್ನಡಕ ಮಾತ್ರ ಬಾರದೆ ಇರುವದನ್ನ ಕಂಡ ಈತ ಮತ್ತೆ ಪೋನ್ ಮಾಡಿದರೆ ವ್ಯಾಪ್ತಿ ಪ್ರದೇಶದ ಹೊರಗಿದೆ ಎಂಬ ಸಂದೇಶ ಬರುತ್ತಿತ್ತು. ಅಂತೂ ಇಂಗೂ ತಿಂದ ಮಂಗನಂತಾದ ಈತ ಮರ್ಯಾದೆಗೆ ಅಂಜಿ ಅತ್ತ ಪೊಲೀಸ್ ಠಾಣೆಗೂ ದೂರು ನೀಡಲಾಗದೆ, ಇತ್ತ ನೆಮ್ಮದಿಯಿಂದ ನಿದ್ರಿಸಲು ಆಗದೆ ನಗ್ನ ಲೋಕದ ಮಾಯಾಜಾಲ ಕನ್ನಡಕವು ಕನಸಿನಲ್ಲಿಯೆ ಕಮರುವಂತಾಗಿದೆ. ಈ ಹಿಂದೆ ಹಲವರ ವಿಚಾರವಾಗಿ ಪೊಲೀಸ್ ಠಾಣೆಯ ಬಾಗಿಲ ತಟ್ಟಿದ ಈ ವೈದ್ಯರು ಈಗ ದೂರು ನೀಡದಿರುವುದು ಕುತೂಹಲ ಮೂಡಿಸಿದೆ. ಈ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡಿದ್ದಕ್ಕಿಂತ ಹೆಚ್ಚಾಗಿ ವಕೀಲರಂತೆ ಕಾನೂನು ಪಾಠ ಮಾಡಿದ್ದೆ ಹೆಚ್ಚು ಹಾಗಿದ್ದರೂ ಇದೀಗ ದೀಪದ ಬುಡದಲ್ಲಿ ಕತ್ತಲೆ ಎನ್ನುವಂತೆ ಸ್ವಯಂಕೃತ ಅಚ್ಚಾತುರ್ಯದಿಂದ ಪೆಚ್ಚು ಮೋರೆ ಹಾಕಿಕೊಂಡು ಚುಚ್ಚುಮದ್ದು ನೀಡಬೇಕಿದೆ.