ರಾಮನಗರದ ಆಡಾಳಿಯಲ್ಲಿ ನಡೆದ ವಿವಾಹಿತ ಮಹಿಳೆಯ ಸಾವಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್ : ಇಬ್ಬರ ಬಂಧನ

ಜೋಯಿಡಾ: ತಾಲ್ಲೂಕಿನ ರಾಮನಗರದ ಆಡಾಳಿಯಲ್ಲಿ ವಿವಾಹಿತ ಮಹಿಳೆಯ ಸಾವಿನ ಪ್ರಕರಣಕ್ಕೆ ಮಂಗಳವಾರ ಹೊಸ ಟ್ವಿಸ್ಟ್ ಸಿಕ್ಕಿದೆ. ಮೃತ ಮಹಿಳೆಯ ಹಳೆಯ ಒಂದು ವಿಡಿಯೋ ಹೊರಬಿದ್ದಿದೆ. ಅದರಲ್ಲಿ ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದು, ಪತಿ ಗಮನ ಹರಿಸುತ್ತಿರಲಿಲ್ಲ ಎನ್ನಲಾಗಿದೆ. ಈ ನಡುವೆ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತಿ ದಯಾನಂದ ದೇಸಾಯಿ ಹಾಗೂ ಪತಿಯ ಸಹೋದರ ಗೋಪಾಲ ದೇಸಾಯಿ ಅವರನ್ನು ರಾಮನಗರ ಪೊಲೀಸರು ಬಂಧಿಸಿದ್ದಾರೆ.

ವಿವಾಹಿತ ಮಹಿಳೆ ಮಂಜರಿ ದಯಾನಂದ ದೇಸಾಯಿ (26) ಮೃತದೇಹ ಸೋಮವಾರ ಆಡಾಳಿಯಲ್ಲಿರುವ ಡಿಬಿಎಲ್ ಕಂಪನಿಯ ಕಲ್ಲು ಕೋರೆಯಲ್ಲಿ ನೀರು ತುಂಬಿಕೊಂಡಿರುವ ಹೊಂಡದಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಮಂಜರಿ ಸಹೋದರ ಲುಮಾ ಜಯಬಾ ರಾಣೆ ರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅದರಲ್ಲಿ ಮಂಜರಿ ಅವರಿಗೆ ಗಂಡನ ಮನೆಯ ಕಡೆಯವರು ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ. ಮಂಜರಿ 2017 ರಲ್ಲಿ ದಯಾನಂದ ದೇಸಾಯಿ ಅವರನ್ನು ವಿವಾಹವಾಗಿದ್ದರು. ಆ ನಂತರ ಗಂಡನ ಮನೆಯಲ್ಲಿ ಆಕೆಗೆ ವಿವಿಧ ಕಾರಣಗಳಿಗಾಗಿ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದರು. ಪತಿಯಿಂದ ಪದೇ ಪದೇ ವರದಕ್ಷಿಣೆ ಕಿರುಕುಳ‌ ಇತ್ತು ಎನ್ನುವುದನ್ನು ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.

ಅದರಂತೆ ಪೊಲೀಸರು ಆಕೆಯ ಪತಿ ದಯಾನಂದ ದೇಸಾಯಿ ಮತ್ತು ಪತಿಯ ಸಹೋದರ ಗೋಪಾಲ ದೇಸಾಯಿ ಅವರನ್ನು ಬಂಧಿಸಿ. ಸೆಪ್ಟೆಂಬರ್ 2 ರವರೆಗೆ ಪೋಲಿಸ್ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಈ‌ ಬಗ್ಗೆ ರಾಮನಗರ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

….
ಮೂರು ತಿಂಗಳ ಹಿಂದೆ ಮಂಜರಿ ಗಂಡನ ಮನೆಯ ಕಡೆಯವರಿಂದ ಕಿರುಕುಳಕ್ಕೆ ಒಳಗಾಗಿ ಮನೆ ಬಿಟ್ಟು ಹೋಗಿದ್ದಳು, ಆ ವೇಳೆಯಲ್ಲಿ ಆಕೆಯ ಸಂಬಂಧಿಕರು ಅವಳು ಮಾತನಾಡುತ್ತಿದ್ದ ವಿಡಿಯೋ ಮಾಡಿದ್ದಾರೆ… ಅದರಲ್ಲಿ ಅವಳ ಗಂಡ ತಾನು ಕೆಲಸ ಮಾಡುವ ಸ್ಥಳಕ್ಕೆ ಕರೆದುಕೊಂಡು ಹೋಗಲು ನಿರಾಕರಿಸುತ್ತಿದ್ದು, ಮನೆಯಲ್ಲಿ ಕೆಲಸ ಮಾಡುತ್ತಿದ್ದರೂ ಕೂಡಾ ಮನೆಯಲ್ಲಿರುವ ಸದಸ್ಯರು ಪದೇ ಪದೇ ಕಿರುಕುಳ ನೀಡುತ್ತಿದ್ದರು. ನಾನು ದುಡಿಯುತ್ತಿದ್ದರೂ ಉಚಿತವಾಗಿ ಕುಳಿತು ತಿನ್ನುತ್ತೇನೆ ಎಂದು ಆರೋಪ ಮಾಡಲಾಗುತ್ತಿತ್ತು ಎಂದು ಮಂಜರಿ ಈ ವಿಡಿಯೋದಲ್ಲಿ ಹೇಳಿದ್ದಾರೆ. ಈ ವಿಡಿಯೋ ಇದೀಗ ಪೊಲೀಸರ ಕೈಗೆ ತಲುಪಿದೆ.