3 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ: ನ.13ರಂದು ವೇತನ ಸಹಿತ ರಜೆಗೆ ಆದೇಶ

ಬೆಂಗಳೂರು: ಉಪಚುನಾವಣೆ ಹಿನ್ನೆಲೆ ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು ಕ್ಷೇತ್ರ ವ್ಯಾಪ್ತಿಯ ಎಲ್ಲ ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳು ಮತ್ತು ಬ್ಯಾಂಕುಗಳಿಗೆ ನ.13ರಂದು ವೇತನ ಸಹಿತ ರಜೆ ನೀಡಲು ಸರ್ಕಾರ ಆದೇಶಿಸಿದೆ.

ಬುಧವಾರದಂದು ಶಿಗ್ಗಾಂವಿ, ಸಂಡೂರು ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಡೆಯಲಿದೆ. ಈ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಎಲ್ಲ ರಾಜ್ಯ ಸರ್ಕಾರಿ ಕಚೇರಿಗಳಿಗೆ, ಶಾಲಾ ಕಾಲೇಜುಗಳಿಗೆ (ಅನುದಾನಿತ ಶಿಕ್ಷಣ ಸಂಸ್ಥೆಗಳು ಒಳಗೊಂಡಂತೆ) ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳು, ಜೀವವಿಮಾ ನಿಗಮ, ಹಣಕಾಸು ಸಂಸ್ಥೆಗಳು, ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ಎಲ್ಲ ಅರ್ಹ ಮತದಾರರಿಗೆ ಸೀಮಿತವಾದಂತೆ ಹಾಗೂ ಮತದಾನ ಮಾಡಲು ಅನುಕೂಲವಾಗುವಂತೆ ರಜೆ ನೀಡುವಂತೆ ಆದೇಶ ಹೊರಡಿಸಲಾಗಿದೆ.

ಒಂದು ದಿನದ ವೇತನ ಸಹಿತ ರಜೆ ಮಂಜೂರು ಮಾಡಲು ಅಧಿಕಾರವುಳ್ಳ ಅಧಿಕಾರಿಗಳು ಮಂಜೂರು ಮಾಡುವ ಷರತ್ತಿಗೊಳಪಟ್ಟು ಒಂದು ದಿನದ ವೇತನ ಸಹಿತ ರಜೆಯನ್ನು ನೀಡಲು ಆದೇಶಿಸಿದೆ.