ದೇವನಹಳ್ಳಿ/ಬಳ್ಳಾರಿ: ಗುರು ಪೂರ್ಣಿಮೆ ಹಿನ್ನೆಲೆಯಲ್ಲಿ ರಾಜ್ಯದೆಲ್ಲೆಡೆ ಗುರುಪೂರ್ಣಿಮಾ ಮಹೋತ್ಸವ ಜತೆಗೆ ಸಾಯಿಬಾಬಾ ಮಂದಿರಗಳಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿತ್ತು. ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮದಲ್ಲಿರುವ ಶ್ರೀ ಸಾಯಿಬಾಬಾ ಸೇವಾ ಕೇಂದ್ರದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು.
ಸಾಯಿಬಾಬಾರ ಮೂರ್ತಿಗೆ ಬಿಳಿ ಗುಲಾಬಿ ಹಾಗೂ ಮುಸುಕಿನ ಜೋಳದಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಸುಮಾರು 10 ಸಾವಿರಕ್ಕೂ ಅಧಿಕ ಭಕ್ತಾಧಿಗಳು ಸ್ವಾಮಿಯ ದರ್ಶನ ಪಡೆದರು. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಂದ ಭಕ್ತಾರು ಆಗಮಿಸಿದ್ದರು. ಭಾನುವಾರ ಆಗಿದ್ದರಿಂದ ಮುಂಜಾನೆಯಿಂದಲೇ ಭಕ್ತರ ದಂಡು ಹರಿದು ಬಂದಿತ್ತು. ಬಂದಿದ್ದ ಎಲ್ಲಾ ಭಕ್ತಾಧಿಗಳಿಗೆ ವಿಶೇಷ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಜತೆಗೆ ಭಕ್ತಾಧಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಇನ್ನೂ ಬಳ್ಳಾರಿಯ ಬಾಲಾಂಜನೇಯ ಸ್ವಾಮಿ ಮಠದಲ್ಲಿ ಹರಿಹರಪುರದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾ ಸ್ವಾಮೀಜಿ ವ್ಯಾಸ ಪೂರ್ಣಿಮೆಯಂದು ಚಾತುರ್ಮಾಸ್ಯ ವ್ರತ ಸಂಕಲ್ಪವನ್ನು ಕೈಗೊಂಡರು. ಇತ್ತ ಆಷಾಢ ಹುಣ್ಣಿಮೆ ಹಿನ್ನೆಲೆಯಲ್ಲಿ ಕೊಪ್ಪಳದ ಹುಲಗಿ ಕ್ಷೇತ್ರಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಹರಿದು ಬಂದಿದ್ದರು. ತುಂತುರು ಮಳೆಯ ಮಧ್ಯೆಯು ಕೊಪ್ಪಳ ತಾಲೂಕಿನ ಹುಲಿಗಿಯ ಶ್ರೀಹುಲಿಗೆಮ್ಮದೇವಿಯ ದರ್ಶನ ಪಡೆದರು.