ಜೋಯಿಡಾದ ದೇವರಾಜ ಅರಸು ಭವನದಲ್ಲಿ‌ ಮಾಜಿ ಮುಖ್ಯಮಂತ್ರಿ ದಿ: ದೇವರಾಜ ಅರಸು ಅವರ ಜನ್ಮದಿನಾಚರಣೆ

ಜೋಯಿಡಾ : ತಾಲ್ಲೂಕಾಡಳಿತ, ತಾಲ್ಲೂಕು ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಡಿ ಇಂದು ಭಾನುವಾರ ಜೋಯಿಡಾ ತಾಲ್ಲೂಕು ಕೇಂದ್ರದಲ್ಲಿರುವ ದೇವರಾಜ ಅರಸು ಭವನದಲ್ಲಿ  ಮಾಜಿ ಮುಖ್ಯಮಂತ್ರಿ ದಿ:ಡಿ.ದೇವರಾಜ ಅರಸು ಅವರ 108 ನೇ ಜನ್ಮ ದಿನಾಚರಣೆ ಕಾರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ದಿ:ಡಿ.ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪುಷ್ಪ ಗೌರವವನ್ನು ಸಲ್ಲಿಸಿ ಕಾರ‍್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡಿದ ಸಹಾಯಕ ಆಯುಕ್ತೆ ಜಯಲಕ್ಷ್ಮಿರಾಯಕೋಡ ಅವರು ದೇವರಾಜ ಅರಸು ಅವರು ಜಾರಿಗೆ ತಂದ ಕ್ರಾಂತಿಕಾರಿ ಭೂ ಸುಧಾರಣೆ ಕಾಯ್ದೆ, ನಮ್ಮೆಲ್ಲರಿಗೂ ಅತ್ಯಂತ ಸ್ಪೂರ್ತಿದಾಯಕ. ಕರ್ನಾಟಕದಲ್ಲಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಘೋಷಣೆಯನ್ನು ಅಕ್ಷರಶಃ ಪಾಲಿಸಿದವರು ದೇವರಾಜ ಅರಸು ಎಂದರು. ಅರಸುರವರು ಭೂ ಕಂದಾಯ ಅಧಿನಿಯಮವನ್ನು ಸಹ ಜಾರಿಗೆ ತಂದರು. ಊಳುವವನೇ ಭೂ ಒಡೆಯ ಎಂದು ಘೋಷಣೆ ಮಾಡಿ, ಭೂಮಿಯನ್ನು ಬಡವರಿಗೆ ಹಂಚಿ ಸಾಮಾಜಿಕ ನ್ಯಾಯ ಒದಗಿಸಿದರಲ್ಲದೇ ಸೂರು ಇಲ್ಲದವರಿಗೆ ಸೂರು ಒದಗಿಸಿದರು. ವೃದ್ದಾಪ್ಯ ವೇತನ, ಅಂಗವಿಕಲರ ವೇತನ ಮತ್ತು ಹಿಂದುಳಿದ ವರ್ಗಗಳ ನಿರ್ದೇಶನಾಲಯ ಸಹ ಜಾರಿಗೆ ತಂದರು ಎಂದು ಹೇಳಿದರು. 

ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ರಾಜೇಶ್ ಚೌವ್ಹಾಣ್, ಬಿಜಿವಿಎಸ್ ಕಾಲೇಜಿನ ಉಪನ್ಯಾಸಕರಾದ ಪ್ರಕಾಶ್ ತಗಡಿನಮನಿ, ತಾಲೂಕು ಹಿಂದುಳಿದ ರ‍್ಗಗಳ ಕಲ್ಯಾಣ ಅಧಿಕಾರಿ ಆನಂದ್ ಪಾಟೀಲ್ ಭಾಗವಹಿಸಿ ಸಂದರ್ಭೋಚಿತವಾಗಿ ಮಾತನಾಡಿದರು.

ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಜೋಯಿಡಾ ಗ್ರಾಮ ಪಂಚಾಯತಿ ಅಧ್ಯಕ್ಷೆ ಚಂದ್ರಿಮ ತುಕಾರಾಮ ಮಿರಾಶಿ ಅವರು ವಹಿಸಿದ್ದರು. ಕಾರ‍್ಯಕ್ರಮದಲ್ಲಿ ಜೋಯಿಡಾ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಸಂತೋಷ್ ಮಂಥೆರೋ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಆನಂದ ಬಡಕುಂದ್ರಿ, ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕಲ್ಪನಾ.ಕೆ.ಕಾಂಬಳೆ, ಉಪ ತಹಶೀಲ್ದಾರರುಗಳಾದ ಸಂಜೀವ್ ಭಜಂತ್ರಿ, ಸುರೇಶ್ ಒಕ್ಕುಂದ, ತಹಶೀಲ್ದಾರ್ ಕಚೇರಿಯ ಪ್ರದೀಪ್, ತಾಲ್ಲೂಕು ಮರಾಠಾ ಸಮಾಜದ ಅಧ್ಯಕ್ಷರಾದ ಚಂದ್ರಕಾಂತ ದೇಸಾಯಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು