ದೇವರಾಜ ಅರಸು ಸಾಮಾಜಿಕ ಕ್ರಾಂತಿಯ ಹರಿಕಾರ : ಶಾಸಕ ಆರ್ .ವಿ.ದೇಶಪಾಂಡೆ ಅಭಿಮತ

ಹಳಿಯಾಳ : ಮಾಜಿ ಮುಖ್ಯಮಂತ್ರಿ ದಿ. ಡಿ. ದೇವರಾಜ ಅರಸು ಅವರು, ಬಡತನ ನಿರ್ಮೂಲನೆಗಾಗಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಎಲ್ಲಾ ವರ್ಗಗಳ ನಾಯಕರಾಗಿ ಕಾರ್ಯನಿರ್ವಹಿಸಿ ಜನಮನದ ನಾಯಕರಾಗಿ ಸದಾ ಅಮರರಾಗಿದ್ದಾರೆ. ದೇವರಾಜ ಅರಸು ಅವರು ಸಮಾನತೆ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಾಗಿದ್ದರು ಎಂದು ಶಾಸಕ ಅರ್.ವಿ.ದೇಶಪಾಂಡೆಯವರು ಹೇಳಿದರು.

ತಾಲ್ಲೂಕಾಡಳಿತ, ತಾಲ್ಲೂಕು ಪಂಚಾಯತ್, ದಾಂಡೇಲಿ ನಗರಸಭೆ, ಪುರಸಭೆ ಹಳಿಯಾಳ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಡಿ ಇಂದು ಭಾನುವಾರ ಹಳಿಯಾಳ ಪಟ್ಟಣದ ದೇವರಾಜ ಅರಸು ಸಭಾಭವನದಲ್ಲಿ ದಿ:ಡಿ.ದೇವರಾಜ ಅರಸು ಅವರ 108 ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು. ಉಳುವವನೆ ಭೂಮಿ ಒಡೆಯ ಕಾಯ್ದೆ ಜಾರಿಗೆ ತರುವ ಮೂಲಕ ಸರ್ವರಿಗೂ ಸಮಬಾಳು ಮತ್ತು ಸಮಪಾಲು ಎಂಬುದನ್ನು ತೋರಿಸಿ ಕೊಟ್ಟಂತಹ ಮಹಾನ್ ವ್ಯಕ್ತಿ ಅರಸು ಅವರು, ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅನೇಕ ಸವಾಲು ಹಾಗೂ ವಿರೋಧಗಳನ್ನು ಎದುರಿಸಿದರೂ ಹಿಂದುಳಿದ ವರ್ಗಗಳು ಸೇರಿದಂತೆ ನಾನಾ ವರ್ಗಗಳ ಅಭಿವೃದ್ಧಿಗೆ ಶ್ರಮಿಸಿದರು ಎಂದು ತಿಳಿಸಿದರು. ದೇವರಾಜ ಅರಸು ಅವರು ಸಮಾಜಕ್ಕೆ ನೀಡಿದಂತಹ ಕೊಡುಗೆ ಅಪಾರ. ಭೂ ಸುಧಾರಣೆ, ವೃದ್ಧಾಪ್ಯ ವೇತನ, ಅನಿಷ್ಟ ದೇವದಾಸಿ ಪದ್ಧತಿಯನ್ನು ತೊಡೆದು ಹಾಕಲು ಶ್ರಮಿಸಿದ ಮಹಾನ್ ವ್ಯಕ್ತಿ ಅವರಾಗಿದ್ದರು ಎಂದರು.

ವೇದಿಕೆಯಲ್ಲಿ ತಹಶೀಲ್ದಾರ್ ಬಿ.ಕೆ ರತ್ನಾಕರ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಪರಶುರಾಮ ಗಸ್ತೆ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಸುಜಾತ.ಎ.ಖಡತಾರೆ, ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಕೆ.ಎಂ. ನದಾಫ್, ಪುರಸಭೆಯ ಮುಖ್ಯ ಅಧಿಕಾರಿ ಅಶೋಕ್ ಸಾಳೆನ್ನವರ್, ಹಿಂದುಳಿದ ವರ್ಗಗಳ ಇಲಾಖೆಯ ಭಾಗಿರಥಿ ಮತ್ತು ಚಿದಾನಂದ, ಪುರಸಭೆಯ ನಿಕಟಪೂರ್ವ ಅಧ್ಯಕ್ಷ ಅಜರ್ ಬಸರಿಕಟ್ಟಿ, ಪುರಸಭೆಯ ನಿಕಟ ಪೂರ್ವ ಉಪಾಧ್ಯಕ್ಷೆ ಸುವರ್ಣಾ ಮಾದರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣ ಪಾಟೀಲ್ ಕೆಪಿಸಿಸಿ ಸದಸ್ಯರಾದ ಸುಭಾಷ್ ಕೋರ್ವೇಕರ್, ಮೊದಲಾದವರು ಉಪಸ್ಥಿತರಿದ್ದರು.