ಹಳಿಯಾಳ ತಾಲ್ಲೂಕಿನ ಭಾಗವತಿಯಲ್ಲಿ ಪ್ರತ್ಯಕ್ಷವಾದ ಆನೆ : ಭತ್ತದ ಗದ್ದೆಯಲ್ಲಿ ರಂಪಾಟ

ಹಳಿಯಾಳ : ಹಚ್ಚ ಹಸಿರಿನ ಪ್ರಕೃತಿ ಸೌಂದರ್ಯದ ಮಧ್ಯೆಯಿರುವ ಹಳಿಯಾಳ ತಾಲ್ಲೂಕಿನ ಭಾಗವತಿಯಲ್ಲಿ ಒಂಟಿ ಸಲಗವೊಂದು ಪ್ರತ್ಯಕ್ಷವಾಗಿ, ಸ್ಥಳೀಯರ ರೈತರ ಭತ್ತದ ಗದ್ದೆ ಹಾಗೂ ಕಬ್ಬಿನ ತೋಟಕ್ಕೆ ನುಗ್ಗಿ ಕೃಷಿ ಹಾನಿ ಮಾಡಿದ ಘಟನೆ ಬುಧವಾರ ನಡೆದಿದೆ.

ಭಾಗವತಿಯ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿರುವ ಕೃಷಿ ಜಮೀನಿಗೆ ಲಗ್ಗೆಯಿಟ್ಟ ಆನೆ ಅಲ್ಲಿ ಕಬ್ಬು ಮತ್ತು ಭತ್ತದ ಗದ್ದೆಗಳಲ್ಲಿ ಓಡಾಡಿಕೊಂಡು ರೈತರ ಕೃಷಿ ಬೆಳೆಗಳನ್ನು ಧ್ವಂಸಗೊಳಿಸಿದೆ. ಆನೆಯನ್ನು ಓಡಿಸಲು ಸ್ಥಳೀಯ ರೈತರು ಹರಸಾಹಸ ಪಟ್ಟಿದ್ದು, ರೈತರ ಗದ್ದೆಗಳಿಗೆ ಆನೆ ಬಂದಿರುವ ಮಾಹಿತಿಯನ್ನು ಪಡೆದುಕೊಂಡ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಆನೆಯನ್ನು ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆನೆಯನ್ನು ಓಡಿಸಲು ರೈತರು ಸಹ ಅರಣ್ಯ ಇಲಾಖೆಯ ಜೊತೆ ಕೈ ಜೋಡಿಸಿದ್ದಾರೆ. ಇನ್ನೂ ಈ ಭಾಗದಲ್ಲಿ ಆನೆಗಳು ಪ್ರತ್ಯಕ್ಷವಾಗುತ್ತಿರುವುದು ಮಾಮುಲಿ ಎಂಬಂತಾಗಿದೆ. ಒಂದು ಕಡೆ ಮಳೆಯಿಂದ ಕಂಗೆಟ್ಟಿರುವ ರೈತರಿಗೆ ಇದೀಗ ಅದು ಸಾಲದೆಂಬಂತೆ ಆನೆ ಕಾಟ ಶುರುವಾಗತೊಡಗಿದೆ.