ಹಳಿಯಾಳ : ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆ ಹಳಿಯಾಳ ವತಿಯಿಂದ ರೈತರಿಗೆ ಸಮಗ್ರ ಕೃಷಿ ಹಾಗೂ ಕಬ್ಬಿನ ಅಭಿವೃದ್ಧಿ ಮಾಹಿತಿ ಕಾರ್ಯಕ್ರಮವನ್ನು ಹಳಿಯಾಳ ತಾಲೂಕಿನ ತತ್ವಣಗಿ ಗ್ರಾಮದ ಶಿವಾಜಿ ಹುಲಕೊಪ್ಪ್ಕರ್ ಹೊಲದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಳಿಯಾಳ ಪಶು ಸಂಗೋಪನೆ ಇಲಾಖೆಯ ವೈದ್ಯಾಧಿಕಾರಿ ಡಾ.ಕೆ.ಎಮ್. ನದಾಫ್ ಅವರು ಇಂದಿನ ದಿನಮಾನಗಳಲ್ಲಿ ಸಮಗ್ರ ಹಾಗೂ ಸಾವಯವ ಕೃಷಿ ಯಶಸ್ವಿಯಾಗಬೇಕಾದರೆ ಹೈನುಗಾರಿಕೆ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಅದುದರಿಂದ ಪ್ರತಿಯೊಬ್ಬ ರೈತರು ಹೈನುಗಾರಿಕೆಯನ್ನು ಉಪಕಸುಬುನ್ನಾಗಿ ಮಾಡಿಕೊಳ್ಳುವುದರಿಂದ ಅರ್ಥಿಕವಾಗಿ ಸ್ವಾವಲಂಬಿಗಳಾಗಲು ಸಹಕಾರಿಯಾಗುತ್ತದೆ ಎಂದು ತಿಳಿಸಿ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಳಿಯಾಳ ತೋಟಗಾರಿಕೆ ಇಲಾಖೆಯ ಅಧಿಕಾರಿ ಮಂಜುನಾಥ ಕುರುಬೆಟ್ಟರವರು ನೀರಾವರಿ ಸೌಲಭ್ಯ ಹೊಂದಿರುವ ರೈತರು ಕೃಷಿಯ ಜೊತೆಗೆ ತೋಟಗಾರಿಕೆ ಬೆಳೆಗಳಾದ ಗೋಡಂಬಿ, ಬಾಳೆ, ಮತ್ತು ತರಕಾರಿ ಬೆಳೆಗಳನ್ನು ಬೆಳೆಸುವುದರ ಮೂಲಕ ಆರ್ಥಿಕ ಸ್ವಾವವಲಂಬನೆ ಪಡೆಯಲು ಸಾದ್ಯ ಎಂದರು.
ಕಾರ್ಯಕ್ರಮದಲ್ಲಿ ತತ್ವಣಗಿ ಗ್ರಾಮದ ಪ್ರಗತಿಪರ ರೈತರಾದ ಶಿವಾಜಿ ಹುಲಕೊಪ್ಕರ ಹಾಗೂ ಮಹಾದೇವ ಕೆಳೊಜಿ ಸಾವಯವ ಕೃಷಿ ಪದ್ದತಿ ಅಳವಳಿಸಿಕೊಂಡಿರುವ ಬಗ್ಗೆ ಅನುಭವ ಹಂಚಿಕೊಂಡರು.
ಕೆನರಾ ಬ್ಯಾಂಕ್ ದೇಶಪಾಂಡೆ ಸಂಸ್ಥೆಯ ಯೋಜನಾಧಿಕಾರಿಯಾದ ಸಂತೋಷ ಪರೀಟರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಕ್ಷೇತ್ರ ಮೇಲ್ವಿಚಾರಕ ಉಳವಯ್ಯಾ ಬೇಡಿಗೆರಿ ನಿರೂಪಿಸಿ ಸ್ವಾಗತಿಸಿ ಕೊನೆಯದಾಗಿ ವಂದಿಸಿದರು. ತತ್ವಣಗಿ ಗ್ರಾಮದ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿಗಳನ್ನು ಪಡೆದರು.