ದಾಂಡೇಲಿ : ತಾಲ್ಲೂಕಾಡಳಿತ ಆಶ್ರಯದಡಿ ತಹಶೀಲ್ದಾರ್ ಅಶೋಕ್ ಶಿಗ್ಗಾವಿಯವರ ಅಧ್ಯಕ್ಷತೆಯಲ್ಲಿ ನಗರ ಸಭೆಯ ಸಭಾಭವನದಲ್ಲಿ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಮರಳು ಟಾಸ್ಕ್ ಪೋರ್ಸ್ ಸಭೆಯನ್ನು ಆಯೋಜಿಸಲಾಗಿತ್ತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ತಹಶೀಲ್ದಾರ್ ಅಶೋಕ್ ಶಿಗ್ಗಾವಿಯವರು ಅಕ್ರಮ ಮರಳು ಸಾಗಾಟ, ಅಕ್ರಮ ಮರಳು ದಾಸ್ತಾನನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಸಭೆಯನ್ನು ಕರೆಯಲಾಗಿದ್ದು, ಅಕ್ರಮ ಮರಳು ಸಾಗಾಟ, ಇಲ್ಲವೇ ದಾಸ್ತಾನು ಕಂಡು ಬಂದಲ್ಲಿ ತಕ್ಷಣವೆ ಅಗತ್ಯ ಕ್ರಮವನ್ನು ಕೈಗೊಂಡು ಅಕ್ರಮ ಮರಳನ್ನು ಜಪ್ತು ಮಾಡಬೇಕೆಂದು ಸೂಚಿಸಿದರು. ಅರಣ್ಯ ಚೆಕ್ ಪೋಸ್ಟಿನಲ್ಲಿ ವಿಶೇಷ ನಿಗಾವನ್ನಿಟ್ಟುಕೊಳ್ಳಬೇಕು. ಯಾವುದೇ ಕಾರಣಕ್ಕೂ ತಾಲ್ಲೂಕಿನ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳು ತೆಗೆಯುವುದು, ಸಾಗಾಟ ಮತ್ತು ದಾಸ್ತಾನು ಆಗದಂತೆ ಮುನ್ನೆಚ್ಚರಿಕೆಯನ್ನು ವಹಿಸಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಸಿಪಿಐ ಬಿ.ಎಸ್.ಲೋಕಾಪುರ್, ಪಿಎಸೈಗಳಾದ ಐ.ಆರ್.ಗಡ್ಡೇಕರ್, ಯಲ್ಲಪ್ಪ.ಎಸ್, ಕೃಷ್ಣೇಗೌಡ, ವಲಯಾರಣ್ಯಾಧಿಕಾರಿಗಳಾದ ಅಪ್ಪರಾವ್ ಕಲಶೆಟ್ಟಿ, ಅಶೋಕ್ ಶೆಳೆನ್ನವರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಮಂಜುನಾಥ್ ದೇವಾಡಿಗ, ನಗರ ಸಭೆಯ ವ್ಯವಸ್ಥಾಪಕರಾದ ಪರಶುರಾಮ ಶಿಂಧೆ, ನಗರ ಸಭೆಯ ಅಧಿಕಾರಿ ಮೈಕಲ್ ಫರ್ನಾಂಡೀಸ್, ಉಪ ತಹಶೀಲ್ದಾರ್ ರಾಘವೇಂದ್ರ ಪೂಜೇರಿ, ಕಂದಾಯ ಅಧಿಕಾರಿ ರಾಘವೇಂದ್ರ ಪಾಟೀಲ್, ತಾಲ್ಲೂಕು ಪಂಚಾಯ್ತಿಯ ಕವಿತಾ ಜೋಗಳೇಕರ್, ಉಪ ವಲಯಾರಣ್ಯಾಧಿಕಾರಿ ಸಂದೀಪ್ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.