ತಾಟಗೇರಾದ ಪಿಸಾಳಿ ದಂಪತಿಗಳ ಜೀವನದ ಯೋಗ ಬದಲಿಸಿದ ನರೇಗಾ ಕುರಿ ಶೇಡ್

ದಾಂಡೇಲಿ : ಪ್ರಸ್ತುತ ಕಂಪ್ಯೂಟರ್ ಯುಗದಲ್ಲಿ ಯುವಜನತೆ ಉನ್ನತ ಶಿಕ್ಷಣ ಮುಗಿಸಿ ಎಂ.ಎನ್.ಸಿ ಕಂಪನಿಗಳಲ್ಲಿ ಉದ್ಯೋಗ ಗಿಟ್ಟಿಸಲು ಹೆಣಗುತ್ತಿರುವ ಸಮಯದಲ್ಲಿ ಇಲ್ಲೊಂದು ಯುವ ದಂಪತಿಗಳು ಕುರಿ, ಆಡು ಸಾಕಾಣಿಕೆ ಮಾಡಿ ಉತ್ತಮ ಆದಾಯಗಳಿಸುವ ಮೂಲಕ ಯಶಸ್ಸಿನೆಡೆಗೆ ಹೆಜ್ಜೆಯಿಟ್ಟ ಯಶೋಗಾಥೆಯಿದು.

ಹೌದು ದಾಂಡೇಲಿ ತಾಲೂಕಿನ ಆಲೂರು ಗ್ರಾಮದ ಪ್ರಕಾಶ ಪಿಸಾಳಿ ಎಂಬುವವರು ಎಲ್ಲಾ ಗ್ರಾಮೀಣ ಭಾಗದ ಜನರಿಗೆ ಮಾದರಿಯಾಗಿದ್ದಾರೆ. ದಾಂಡೇಲಿ ಇಂದ 7 ಕಿಲೋ ಮೀಟರ್ ಇರುವ ಗ್ರಾಮ ಪಂಚಾಯತಿ ವ್ಯಾಪ್ತಿಯ ತಾಟಗೇರಾ ಗ್ರಾಮದ ಪ್ರಕಾಶ ನಾರಾಯಣ ಪಿಸಾಳಿ ಹಾಗೂ ಛಾಯಾ ಪ್ರಕಾಶ ಪಿಸಾಳಿ ಎಂಬುವವರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 68,000 ರೂ ಸಹಾಯಧನದಲ್ಲಿ ಕುರಿ ಶೆಡ್ ನಿರ್ಮಾಣ ಮಾಡಿಕೊಂಡು ಉತ್ತಮ ಆದಾಯ ಗಳಿಸುತ್ತಿದ್ದಾರೆ.

ಆಡು ಸಾಕಾಣಿಕೆ ಜೊತೆ ಕೋಳಿ, ಜೇನು ಸಾಕಾಣಿಕೆ ಮತ್ತು ನರ್ಸರಿ ನಿರ್ಮಾಣ :

ಈ ದಂಪತಿಗಳು ತಮ್ಮ ಮನೆಯ ಸುತ್ತಲಿರುವ 30×25 ವಿಸ್ತೀರ್ಣ ಪ್ರದೇಶದಲ್ಲಿ ಕುರಿಶೇಡ್ ನಿರ್ಮಾಣ ಮಾಡಿಕೊಂಡಿದ್ದಾರೆ. ಹಾಗೆಯೇ ಆಡು ಸಾಕಾಣಿಕೆ, ಜೊತೆ ಜೊತೆಗೆ ಕುರಿಶೇಡ್ ನ ಕೆಳ ಛಾವಣಿಯಲ್ಲಿ ಕೋಳಿ ಸಾಕಾಣಿಕೆ, ಅದರೊಟ್ಟಿಗೆ ಜೇನು ಸಾಕಾಣಿಕೆ ಮಾಡಿ ಸಹ ಸೈ ಎನಿಸಿಕೊಂಡಿದ್ದಾರೆ. ಇದಲ್ಲದೇ ನರೇಗಾ ಯೋಜನೆಯಡಿ ಎರೆಹುಳು ತೊಟ್ಟಿ ಕಾಮಗಾರಿಯನ್ನು ತೆಗೆದುಕೊಂಡು ವರ್ಷಕ್ಕೆ 10 ಟ್ರ್ಯಾಲಿ ಗೊಬ್ಬರವನ್ನು ಮಾರಾಟ ಮಾಡಿ ಇವರ ಆದಾಯವನ್ನು ಹೆಚ್ಚಿಸಿಕೊಂಡಿದ್ದಾರೆ. ತಮ್ಮ ಕೃಷಿ ಚಟುವಟಿಕೆಯ ನಡುವೆ ಉಳಿದ ಪ್ರದೇಶದಲ್ಲಿ ವಿವಿಧ ಸಸಿಗಳನ್ನು ನೆಡುವ ಮೂಲಕ ಚಿಕ್ಕ ಪ್ರಮಾಣದಲ್ಲಿ ನರ್ಸರಿಯನ್ನು ಕೂಡ ನಡೆಸುತ್ತಿದ್ದಾರೆ. ಛಾಯಾ ಅವರು ರುಡ್ಸೆಟ್ ಸಂಸ್ಥೆಯಿಂದ ಆಡು ಸಾಕಾಣಿಕೆಯ ತರಬೇತಿಯನ್ನು ಕೂಡ ಪಡೆದುಕೊಂಡಿದ್ದಾರೆ.

ನಮ್ಮ ಯಜಮಾನರು ವ್ಯಾಪಾರದಲ್ಲಿ ವಿಶೇಷ ಆಸಕ್ತಿ ಹೊಂದಿದ್ದು, ಯಾವುದನ್ನು ಆಯ್ದುಕೊಂಡರೆ ಉತ್ತಮ ಲಾಭ ಗಳಿಸಬಹುದು ಎಂದು ಯೋಚಿಸುತ್ತಿರುವಾಗ ನರೇಗಾ ಯೋಜನೆಯಡಿ ವಿವಿಧ ವೈಯಕ್ತಿಕ ಕಾಮಗಾರಿಗಳಿಗೆ ಸಹಾಯ ನೀಡುತ್ತಾರೆ ಎಂಬುದನ್ನು ತಿಳಿದು ಕುರಿಶೇಡ್ ಗೆ ಅರ್ಜಿ ಸಲ್ಲಿಸಿ ಈಗ 30 ಆಡು ಮತ್ತು ಕುರಿಗಳನ್ನು ಸಾಕುತ್ತಿದ್ದೇವೆ ಇದರಿಂದ ನಾವು ಉತ್ತಮ ಲಾಭವನ್ನು ಪಡೆದು ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಂಡಿದ್ದೇವೆ ಎಂಬುದು ಛಾಯಾ ಪ್ರಕಾಶ ಅವರ ಮಾತಾಗಿದೆ.