ಮುಂಡಗೋಡ: ತಾಲೂಕಿನ ಬೆಡಸಗಾಂವ ಗ್ರಾಮ ಪಂಚಾಯತ ವ್ಯಾಪ್ತಿಯ ಶ್ಯಾನವಳ್ಳಿ ಗ್ರಾಮದ ಹೊಲವೊಂದರಲ್ಲಿ ಹುಲಿ ಹೆಜ್ಜೆಯ ಗುರುತು ಪತ್ತೆಯಾಗಿದೆ. ಶ್ಯಾನವಳ್ಳಿ ಗ್ರಾಮದ ನಾಗರಾಜ್ ಭಟ್ ಎನ್ನುವವರ ಗದ್ದೆಯಲ್ಲಿ ರಾತ್ರಿ ಹುಲಿ ಓಡಾಡಿದ ಗುರುತುಗಳು ಸ್ಪಷ್ಟವಾಗಿ ಗೋಚರಿಸಿದೆ. ಇನ್ನು ಗದ್ದೆಯಲ್ಲಿ ಹಾಗೂ ಮನೆಯ ಸುತ್ತಮುತ್ತಲು ಹಾಗೂ ದನದ ಕೊಟ್ಟಿಗೆಯ ಹತ್ತಿರ ಹುಲಿಯ ಹೆಜ್ಜೆಗಳು ಪತ್ತೆಯಾದ ಬಗ್ಗೆ ಮಾಹಿತಿ ದೊರೆತಿದೆ. ಹುಲಿ ಹೆಜ್ಜೆ ಗುರುತು ನೋಡಿದ ಗ್ರಾಮಸ್ಥರು ಆತಂಕಗೊAಡಿದ್ದಾರೆ.
ಹುಲಿ ಹೆಜ್ಜೆ ಗುರುತುಗಳನ್ನು ನೋಡಿದ ಶ್ಯಾನವಳ್ಳಿ ಗ್ರಾಮದ ನಾಗರಾಜ್ ಭಟ್ ಹೇಳಿದ್ದಿಷ್ಟು.!
ನಮ್ಮ ತೋಟದಲ್ಲಿ ಕೆಲಸ ಮಾಡುವವರು ಬೆಳಿಗ್ಗೆ ಹೆಜ್ಜೆ ಗುರುತನ್ನ ಕಂಡು ಮಾಹಿತಿ ನೀಡಿದರು. ನಂತರ ಖುದ್ದು ತೋಟಕ್ಕೆ ಹೋದಾಗ ಹೆಜ್ಜೆ ಗುರುತುಗಳು ಕಾಣಿಸಿವೆ. ನಂತರ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದೇನೆ. ಹೆಜ್ಜೆ ಗುರುತಿನ ಮೇಲೆ ಒಂದು ಪೆನ್ ಇಟ್ಟು ಪೋಟೋ ತೆಗೆದು ಕಳಿಸುವಂತೆ ತಿಳಿದ್ದರು. ಈಗಾಗಲೇ ಅರಣ್ಯ ಇಲಾಖೆಯವರಿಗೆ ಫೋಟೋ ಕಳಿಸಿದ್ದೇನೆ. ಆದರೆ ಇಲಾಖೆಯವರು ಇನ್ನೂ ಸ್ಥಳಕ್ಕೆ ಆಗಮಿಸಿಲ್ಲ. ಗುರುತುಗಳನ್ನು ನೋಡಿದರೆ ಪಟ್ಟೆ ಹುಲಿಯ ಹೆಜ್ಜೆ ಇರುವಂತೆ ಕಂಡು ಬರುತ್ತಿದೆ ಎಂದರು. ಇನ್ನು ಕೊಟ್ಟಿಗೆಯ ಹತ್ತಿರ ಹುಲಿ ಬಂದರೂ ಎತ್ತು ಆಕಳು ಹಾಗೂ ನಾಯಿಗೆ ತೊಂದರೆ ಮಾಡಿಲ್ಲ. ಆದರೂ ಅರಣ್ಯ ಇಲಾಖೆ ಖಚಿತ ಪಡಿಸಬೇಕಿದೆ ಎಂದು ನಾಗರಾಜ್ ಭಟ್ ಹೇಳಿದ್ದಾರೆ.