ಯಲ್ಲಾಪುರದಲ್ಲಿ ‘ಸಸ್ಯ ಶ್ರಾವಣ’ – ಹೂ ಗಿಡಗಳು ಹಾಗೂ ಕೃಷಿ ಉತ್ಪನ್ನಗಳ ಪ್ರದರ್ಶನ

ಯಲ್ಲಾಪುರ: ಶ್ರೀಮಾತಾ ರೈತ ಉತ್ಪಾದಕ ಕಂಪನಿ ಹಾಗೂ ತ್ರಿಪುರಾಂಬಿಕಾ ಮಹಿಳಾ ಒಕ್ಕೂಟ, ಮಾತೃ ಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ ‘ಸಸ್ಯ ಶ್ರಾವಣ-೨೦೨೨’ ಹೂ ಗಿಡಗಳು ಹಾಗೂ ಕೃಷಿ ಉತ್ಪನ್ನಗಳ ಪ್ರದರ್ಶನ ಕಾರ್ಯಕ್ರಮ ಪಟ್ಟಣದ ಎಪಿಎಂಸಿ ಆವಾರದಲ್ಲಿ ನಡೆಯಿತು.

ಶ್ರೀಮಾತಾ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಶ್ರೀಪಾದ ಭಟ್ಟ ಮಣ್ಮನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಸ್ಯಗಳನ್ನು ಬೆಳೆಸುವುದರಿಂದ ಆನಂದ ಸಿಗುತ್ತದೆ. ಎಲ್ಲರೂ ಹಸಿರನ್ನು ಬೆಳೆಸಿ, ಉಸಿರನ್ನು ಉಳಿಸುವ ಪ್ರಯತ್ನ ಮಾಡೋಣ ಎಂದರು.

ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ಆದರ್ಶ ಮಹಿಳಾ ಮಂಡಳಿಯ ಅಧ್ಯಕ್ಷೆ ಉಷಾ ಗಾಂವ್ಕಾರ ಕಾರ್ಯಕ್ರಮನ್ನುದ್ದೇಶಿಸಿ ಮಾತನಾಡಿದರು. ಕೃಷಿಕರಾದ ಜಯಲಕ್ಷ್ಮಿ ಹೆಗಡೆ ಹೆಡದಬೈಲ್ ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು. ಸವಿತಾ ಗಾಂವ್ಕಾರ ಜಮಗುಳಿ ಹೂ ಗಿಡಗಳ ಕೃಷಿ ಕುರಿತು ಮಾಹಿತಿ ನೀಡಿದರು.

ಸಂಘಟಕರಾದ ಗಾಯತ್ರಿ ಬೋಳಗುಡ್ಡೆ, ಸಂಧ್ಯಾ ಹೆಗಡೆ, ರಮಾ ದೀಕ್ಷಿತ್, ಜಾಹ್ನವಿ ಭಟ್ಟ, ಮುಕ್ತಾ ಶಂಕರ, ಮನೋರಮಾ ಜೋಶಿ, ಆಶಾ ಪಟೇಲ ಇತರರಿದ್ದರು.

ಕೃಷಿ ಉತ್ಪನ್ನಗಳು ಹಾಗೂ ಹೂ ಗಿಡಗಳ ಪ್ರದರ್ಶನದಲ್ಲಿ ಸಂಧ್ಯಾ ಹೆಗಡೆ ಪ್ರಥಮ, ಭವಾನಿ ಭಟ್ಟ ದ್ವಿತೀಯ, ಗೀತಾ ಭಟ್ಟ ತ್ರತೀಯ ಸ್ಥಾನ ಪಡೆದರು. ಪುಷ್ಪಗುಚ್ಛ ತಯಾರಿಕೆ ಸ್ಪರ್ಧೆಯಲ್ಲಿ ಪ್ರೇಮಾ ಹೆಗ್ಗಾರ, ವೀಣಾ ಅರೆಗುಳಿ, ಶಕುಂತಾಲ ಜೋಷಿ ಬಹುಮಾನ ಪಡೆದರು. ತಾಲೂಕಿನ ವಿವಿಧೆಡೆಯಿಂದ ಮಹಿಳೆಯರು, ಸ್ವಸಹಾಯ ಸಂಘದವರು ತಾವು ಬೆಳೆದ ಹೂ ಗಿಡಗಳು, ಕೃಷಿ ಉತ್ಪನ್ನಗಳ ಪ್ರದರ್ಶನದಲ್ಲಿ ಭಾಗವಹಿಸಿದ್ದರು.