ಅಡಿಕೆ ಕೊಳೆರೋಗದಿಂದ ಕಂಗಾಲಾದ ರೈತ.!

ಯಲ್ಲಾಪುರ: ಹವಾಮಾನ ವೈಪರೀತ್ಯದಿಂದ ತಾಲೂಕಿನ ವಿವಿಧ ಭಾಗಗಳಲ್ಲಿ ಅಡಿಕೆಗೆ ಕೊಳೆರೋಗ ವ್ಯಾಪಿಸಿದ್ದು, ಬೆಳೆಗಾರರನ್ನು ಚಿಂತೆಗೀಡುಮಾಡಿದೆ.

ಮಾವಿನಮನೆ ಗ್ರಾ.ಪಂ ವ್ಯಾಪ್ತಿಯ ಮಲವಳ್ಳಿ, ಮಾವಿನಮನೆ, ಬಾಸಲ, ಬಾರೆ, ವಜ್ರಳ್ಳಿ ಗ್ರಾ.ಪಂ ವ್ಯಾಪ್ತಿಯ ಬಾಗಿನಕಟ್ಟಾ, ಬೀಗಾರ ಭಾಗದಲ್ಲಿ ಹಾಗೂ ಹಾಸಣಗಿ, ಉಮ್ಮಚಗಿ ಗ್ರಾ.ಪಂ ವ್ಯಾಪ್ತಿಯಲ್ಲೂ ಕೆಲವೆಡೆ ಕೊಳೆರೋಗ ಕಾಣಿಸಿಕೊಂಡಿದೆ. ತಾಲೂಕಿನ ಇತರ ಭಾಗಗಳಲ್ಲಿಯೂ ಕೊಳೆರೋಗ ವ್ಯಾಪಿಸುವ ಆತಂಕ ಎದುರಾಗಿದೆ.

ಸಾಮಾನ್ಯವಾಗಿ ಕೊಳೆರೋಗ ಬಾರದಂತೆ ಮೇ ತಿಂಗಳ ಕೊನೆಯಲ್ಲಿ ಅಥವಾ ಜೂನ್ ಆರಂಭದಲ್ಲಿ ಅಡಿಕೆಗೆ ಬೋರ್ಡೋ ಮಿಶ್ರಣ ಅಥವಾ ಇನ್ನಿತರ ಔಷಧಗಳನ್ನು ಸಿಂಪಡಣೆ ಮಾಡುತ್ತಾರೆ. ಆದರೆ ಈ ಬಾರಿ ಜೂನ್ ತಿಂಗಳಲ್ಲಿ ಏಕಾಏಕಿ ಮಳೆ ಜೋರಾದ ಕಾರಣ ಔಷಧಿ ಸಿಂಪಡಣೆ ಸಾಧ್ಯವಾಗಿಲ್ಲ. ಇದು ಕೊಳೆರೋಗ ಆವರಿಸಲು ಪ್ರಮುಖ ಕಾರಣವಾಗಿದೆ ಎನ್ನತ್ತಾರೆ ರೈತರು.

ಕಳೆದ ಒಂದು ವಾರದಿಂದ ಮಳೆ ಬಿಡುವು ನೀಡಿದ್ದು, ಇದೀಗ ರೈತರು ಔಷಧಿ ಸಿಂಪಡಣೆ ಕಾರ್ಯ ಮಾಡುತ್ತಿದ್ದಾರೆ. ಆದರೆ ಈಗಾಗಲೇ ಕಾಲ ಮಿಂಚಿ ಹೋಗಿದ್ದು ಕೊಳೆರೋಗ ಆರಂಭವಾಗಿಬಿಟ್ಟಿದೆ. ಅಡಿಕೆ ಮಿಳ್ಳೆಗಳು ಉದುರಲಾರಂಭಿಸಿವೆ. ಹೀಗಾಗಿ ಈ ಬಾರಿ ಬೆಳೆ ಉಳಿಸಿಕೊಳ್ಳೋದೇ ಕಷ್ಟ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ ಅಡಿಕೆ ಬೆಳೆಗಾರರು.

ತಾಲೂಕಿನಲ್ಲಿ ಈಗಾಗಲೇ ೫೦ ಹೆಕ್ಟೆರ್‌ಗಿಂತ ಹೆಚ್ಚಿನ ಪ್ರದೇಶದಲ್ಲಿ ಕೊಳೆರೋಗ ಕಾಣಿಸಿಕೊಂಡಿದೆ. ರೋಗ ಇನ್ನಷ್ಟು ವ್ಯಾಪಿಸುವ ಮುನ್ನ ಇದರ ನಿಯಂತ್ರಣಕ್ಕೆ ಔಷಧಿ ಸಿಂಪಡಣೆಯೊಂದೇ ಸದ್ಯಕ್ಕಿರುವ ಮಾರ್ಗ ಎನ್ನುವುದು ತೋಟಗಾರಿಕಾ ತಜ್ಞರ ಅಭಿಪ್ರಾಯ.