ವಿದ್ಯಾರ್ಥಿಗಳು ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಚಿಂತನಶೀಲರಾಗಿಬೇಕು : ಡಾ. ಶಿವಾನಂದ ನಾಯಕ


ಅಂಕೋಲಾ: ನಾವು ಸಮಾಜದಲ್ಲಿ ಎಲ್ಲರೊಂದಿಗೆ ಒಂದಾಗಿ ಬದುಕಬೇಕು. ವಿದ್ಯಾರ್ಥಿಗಳು ಶಿಕ್ಷಣ ಪಡೆದು ಉನ್ನತ ಸ್ಥಾನಮಾನಗಳನ್ನು ಗಳಿಸುವ ಮೂಲಕ ಪಾಲಕರ ಮತ್ತು ಕಾಲೇಜಿನ ಘನತೆ ಹೆಚ್ಚಿಸುವಂತಾಗಬೇಕು ಎಂದು ನಿವೃತ್ತ ಪ್ರಾಚಾರ್ಯ ಡಾ.ಶಿವಾನಂದ ನಾಯಕ ಹೇಳಿದರು.
ತಾಲೂಕಿನ ಪೂಜಗೇರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಹೆಣ್ಣುಮಕ್ಕಳು ಕೂಡ ಎಲ್ಲ ಕ್ಷೇತ್ರಗಳಲ್ಲಿಯೂ ತೊಡಗಿಸಿಕೊಳ್ಳುತ್ತಿದ್ದು, ಇದಕ್ಕೆ ಅಶ್ವಿನಿ ಕೊಂಡದಕುಳಿ ಸಾಕ್ಷಿ. ಇವರು ವೃತ್ತಿಯಲ್ಲಿ ಉಪನ್ಯಾಸಕರಾದರೂ ಯಕ್ಷಗಾನದ ಎಲ್ಲ ಪಾತ್ರಗಳನ್ನು ಮಾಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ ಎಂದರು.
ಯಕ್ಷಗಾನ ಕಲಾವಿದೆ ಅಶ್ವಿನಿ ಕೊಂಡದಕುಳಿ ಮಾತನಾಡಿ, ಸಮಾಜದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಮುಕ್ತ ಅವಕಾಶಗಳಿವೆ. ಅವುಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ಪಠ್ಯದ ಜತೆಗೆ ಇತರೆ ಸಾಂಸ್ಕೃತಿಕ ಕಲೆಯನ್ನು ಕರಗತ ಮಾಡಿಕೊಂಡಾಗ ಭವಿಷ್ಯಇನ್ನಷ್ಟು ಉಜ್ವಲವಾಗಲು ಸಾಧ್ಯ. ನನ್ನನ್ನು ಯಕ್ಷಗಾನ ಕ್ಷೇತ್ರದಿಂದಲೇ ಜನರು ಗುರುತಿಸುತ್ತಾರೆ. ನಿಮ್ಮಲ್ಲಿಯೂ ಕೂಡ ಯಾವುದೇ ತರಹದ ಪ್ರತಿಭೆಗಳಿದ್ದರೆ ಅದರಲ್ಲಿ ಹೆಚ್ಚು ತೊಡಗಿಸಿಕೊಂಡು ಬೆಳೆಯುವಂತಾಗಲಿ ಎಂದರು.
ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯೆ ಡಾ. ಶಾರದಾ ಭಟ್ ಮಾತನಾಡಿ, ವಿದ್ಯಾರ್ಥಿಗಳು ದೇಶದ ಭವಿಷ್ಯವನ್ನು ಉಜ್ವಗೊಳಿಸುವವರು. ಹೀಗಾಗಿ ಯಾವುದೇ ದುಶ್ಚಟಗಳಿಗೆ ಬಲಿಯಾಗದೇ ತಂದೆ-ತಾಯಿಗಳ ಹೆಸರನ್ನು ಕಾಪಾಡುವುದರೊಂದಿಗೆ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು. ಹಾಗೇ ತಾವು ಕಲಿತ ಶಾಲಾ-ಕಾಲೇಜುಗಳನ್ನು ಮರೆಯದೇ ಭೇಟಿ ನೀಡಬೇಕು ಎಂದರು.
ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ ಗೌಡ, ಪ್ರತಿನಿಧಿಗಳಾದ ನಾರಾಯಣ ಸಿದ್ದಿ, ಪಲ್ಲವಿ ನಾಯ್ಕ, ಭಾಗ್ಯಶ್ರೀ ಮಹಾಲೆ ಸೌಜನ್ಯಾ ಖಾರ್ವಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಮೇಘನಾ ಸಂಗಡಿಗರು ಪ್ರಾರ್ಥಿಸಿದರು. ಪ್ರಾಧ್ಯಾಪಕ ನಾರಾಯಣಸ್ವಾಮಿ ಸ್ವಾಗತಿಸಿದರು. ಬಸವನಗೌಡ ಪಾಟೀಲ, ರಾಜೇಶ್ವರಿ ಭಟ್ ವರದಿ ವಾಚಿಸಿದರು. ಮೋಹನ ನಾಯ್ಕ ಪರಿಚಯಿಸಿದರು. ಮಧುರಶ್ರೀ, ರಾಜೇಶ್ವರಿ ಟಿ., ಗಿರೀಶ ಬಹುಮಾನಿತರ ಯಾದಿ ವಾಚಿಸಿದರು. ಕೃಷ್ಣ ಗೌಡ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ಸತೀಶ ಗೌಡ ವಂದಿಸಿದರು.