ಕುಮಾರಸ್ವಾಮಿಗೆ ವರ್ಗಾವಣೆ ಬಗ್ಗೆ ವಿದೇಶದಲ್ಲಿ ಮಾಹಿತಿ ಸಿಕ್ಕಿತೇ: ಎಂಬಿ ಪಾಟೀಲ್ ಪ್ರಶ್ನೆ

ಜಯಪುರ, ಕುಮಾರಸ್ವಾಮಿಗೆ ವರ್ಗಾವಣೆ ಬಗ್ಗೆ ವಿದೇಶದಲ್ಲಿ ಮಾಹಿತಿ ಸಿಕ್ಕಿತೇ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ಪ್ರಶ್ನಿಸಿದ್ದಾರೆ. ಸಿಂಗಾಪುರದಿಂದ ಆಗಮಿಸಿದ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ವರ್ಗಾವಣೆ ವಿಚಾರವಾಗಿ 1 ಸಾವಿರ ಕೋಟಿ ದಂಧೆ ನಡೆದಿದೆ ಎಂದು ಆರೋಪಿಸಿದ್ದರು.ಈ ಬಗ್ಗೆ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ವ್ಯಂಗ್ಯವಾಡಿದ ಎಂ.ಬಿ. ಪಾಟೀಲರು, ವರ್ಗಾವಣೆ ಬಗ್ಗೆ ಕುಮಾರಸ್ವಾಮಿಗೆ ವಿದೇಶದಲ್ಲಿ ಮಾಹಿತಿ ಸಿಕ್ಕಿತೇ ಎಂದು ಪ್ರಶ್ನಿಸಿದರು. ಅಲ್ಲದೆ, ಪೆನ್​ಡ್ರೈವ್ ಇದೆ ಅಂತಾ ಹೇಳಿ ಸುಮ್ಮನೇ ನಿಂದನೆ ಮಾಡಬಾರದು. ಪೆನ್​ಡ್ರೈವ್​ ಹೊರ ಬರಲಿಲ್ಲ, ಬರೀ ಮುಚ್ಚಿಕೊಂಡು ಹೇಳಿದ್ದೇ ಆಯ್ತು. ಕುಮಾರಸ್ವಾಮಿ ಬಳಿ ಪೆನ್ನೂ ಇಲ್ಲ ಡ್ರೈವ್​ ಇಲ್ಲ ಎಂದರು.

ಹೆಚ್​.ಡಿ.ಕುಮಾರಸ್ವಾಮಿ ಅವಧಿಯಲ್ಲಿ ವರ್ಗಾವಣೆ ಆಗಿಯೇ ಇಲ್ವಾ ಎಂದು ಪ್ರಶ್ನಿಸಿದ ಪಾಟೀಲರು, ವರ್ಗಾವಣೆ ಆಡಳಿತಾತ್ಮಕ ವಿಷಯ. ಅವರ ನೇತೃತ್ವದ ಸರ್ಕಾರದಲ್ಲಿ ನಾನೇ ಗೃಹಸಚಿವನಾಗಿದ್ದೆ. ಆಗ ಸಾಕಷ್ಟು ವರ್ಗಾವಣೆಗಳಿಗೆ ತಡೆಯಾಜ್ಞೆ ಆಗಿದೆ ಎಂದರು.

ಸರ್ಕಾರ ಪತನಕ್ಕೆ ವಿದೇಶದಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂಬ ವದಂತಿ ವಿಚಾರವಾಗಿ ಮಾತನಾಡಿದ ಎಂಬಿ ಪಾಟೀಲ್, ನಮ್ಮ ಸರ್ಕಾರ ಅಸ್ಥಿರಗೊಳಿಸಲು ಆಗುವುದಿಲ್ಲ. 136 ಶಾಸಕರಿದ್ದೇವೆ ಯಾರಿಗೂ ಸರ್ಕಾರ ಅಲುಗಾಡಿಸೋಕೆ ಆಗಲ್ಲ. ನಮ್ಮ ಸರ್ಕಾರ 5 ವರ್ಷ ಸುಭದ್ರ ಆಡಳಿತ ನೀಡುತ್ತದೆ. ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಮೊದಲು ಕುಮಾರಸ್ವಾಮಿ ತಮ್ಮ ಶಾಸಕರನ್ನು ಸಂಭಾಳಿಸಿಕೊಳ್ಳಲಿ. ಇಲ್ಲೇ ಏನು ಮಾಡಲು ಆಗಲ್ಲ, ವಿದೇಶದಲ್ಲಿ ಏನ್ ಮಾಡುತ್ತಾರೆ ಎಂದು ಪ್ರಶ್ನಿಸಿದರು.

ಎಸ್​ಸಿ ಎಸ್​ಟಿ ಸಮುದಾಯದ ಕಲ್ಯಾಣಕ್ಕಾಗಿ ಮೀಸಲಿಟ್ಟ ಅನುದಾನವನ್ನು ಗ್ಯಾರಂಟಿ ಯೋಜನೆಗೆ ಬಳಕೆ ಮಾಡಲಾಗುತ್ತಿದೆ ಎಂಬ ಬಿಜೆಪಿ ನಾಯಕ ಮುರುಗೇಶ್ ನಿರಾಣಿ ಆರೋಪಕ್ಕೆ ತಿರುಗೇಟು ನೀಡಿದ ಪಾಟೀಲರು, ಹಣ ಯಾವಾಗ ದುರುಪಯೋಗ ಆಗಿದೆ ಎಂದು ನಿರಾಣಿಯರನ್ನ ಕೇಳಿ, ಮೆಟ್ರೋ ರೈಲಿಗಾಗಿ ಬಿಜೆಪಿ ಎಸ್​ಸಿ ಎಸ್​ಟಿ ಹಣ ಬಳಕೆ‌ ಮಾಡಿದೆ ಎಂದರು.