ಹಾಸನ: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ನಡೆದ ಸಭೆಯಲ್ಲಿ ಕಾರ್ಯಕರ್ತರ ಹೈಡ್ರಾಮ ನಡೆದಿದೆ. ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ಕಾರಣರಾದವರನ್ನು ವೇದಿಕೆಯಿಂದ ಕೆಳಗಿಳಿಸುವಂತೆ ತನ್ನ ಎದುರೇ ಗಲಾಟೆ ನಡೆಸಿರುವುದು ಜಿಲ್ಲಾ ಉಸ್ತುವಾರಿ ಸಚಿವ ಕೆಎನ್ ರಾಜಣ್ಣ ಅವರ ಕಣ್ಣನ್ನು ಕೆಂಪಗಾಗಿಸಿದವು. ನಾನು ಈ ರೀತಿ ಗಲಾಟೆ ಮಾಡಿಯೇ ರಾಜಕಾರಣ ಮಾಡಿ ಇಲ್ಲಿ ಬಂದು ನಿಂತಿದ್ದೇನೆ. ನನ್ನ ಹತ್ತಿರ ಇದೆಲ್ಲ ಇಟ್ಟುಕೊಳ್ಳಬೇಡಿ, ನನ್ನ ಬಳಿ ಇದೆಲ್ಲಾ ನಡೆಯಲ್ಲ ಅಂತ ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಾಗೂ ನೂತನ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸ್ವಾಗತ ಕಾರ್ಯಕ್ರಮವನ್ನು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಚುನಾವಣೆಯಲ್ಲಿ ಬೇರೆ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕಾಂಗ್ರೆಸ್ ಅಭ್ಯರ್ಥಿಗಳನ್ನು ಕೆಲ ಮುಖಂಡರು ಸೋಲಿಸಿದ್ದಾರೆ ಅಂತ ಚಕಾರ ಎತ್ತಿದ ಕಾರ್ಯಕರ್ತರು, ಅಂತಹವರನ್ನು ವೇದಿಕೆ ಮೇಲೆ ಕೂರಿಸಿದ್ದೀರಾ, ಮೊದಲು ಅವರನ್ನು ವೇದಿಕೆಯಿಂದ ಕೆಳಗಿಳಿಸಿ ನಂತರ ಸಭೆಯನ್ನು ಮುಂದುವರಿಸಿ ಅಂತ ಸಚಿವರ ಎದುರೇ ಗಲಾಟೆ ನಡೆಸಿದ್ದಾರೆ.