ಬೌತಶಾಸ್ತ್ರವು ಮೂಲ ವಿಜ್ಞಾನದ ಸ್ವರೂಪವಾಗಿದೆ : ಡಾ.ಪಿ.ವಿ.ಶಾನಭಾಗ್

ದಾಂಡೇಲಿ : ಭೌತಶಾಸ್ತ್ರವು ಮೂಲ ವಿಜ್ಞಾನದ ಸ್ವರೂಪವಾಗಿರುವುದಲ್ಲದೇ ಅತ್ಯಂತ ಮೂಲಭೂತ ವೈಜ್ಞಾನಿಕ ವಿಭಾಗಗಳಲ್ಲಿ ಒಂದಾಗಿದೆ. ಬ್ರಹ್ಮಾಂಡವು ಹೇಗೆ ವರ್ತಿಸುತ್ತದೆ ಎಂಬುವುದನ್ನು ಅರ್ಥಮಾಡಿಕೊಳ್ಳುವುದು ಬೌತಶಾಸ್ತ್ರದ ಪ್ರಮುಖ ಗುರಿಯಾಗಿದೆ. ಯಾವುದೇ ವಸ್ತುವಿನ ಚಲನೆಗೆ ಮತ್ತು ವಸ್ತುಗಳ ಶಕ್ತಿಯ ಬಿಡುಗಡೆಗೆ ಮೂಲ ವಿಜ್ಞಾನವೇ ಭೌತಶಾಸ್ತ್ರ. ಚಲನೆಗಳು ನಡೆಯದಿದ್ದಲ್ಲಿ ನಮ್ಮ ನಿತ್ಯ ಜೀವನ ಸುಸೂತ್ರವಾಗಿ ನಡೆಯಲು ಸಾಧ್ಯವಿಲ್ಲ ಎಂದು ನಿವೃತ್ತ ಪ್ರಾಧ್ಯಾಪಕರಾದ ಡಾ.ಪಿ.ವಿ.ಶಾನಭಾಗ್ ಅವರು ನುಡಿದರು.

ಅವರು ಇಂದು ನಗರದ ಬಂಗೂರನಗರ ಪದವಿ ಮಹಾವಿದ್ಯಾಲಯದಲ್ಲಿ ಕಾಲೇಜಿನ ವಿಜ್ಞಾನ ಸಂಘ, ಐಕ್ಯೂಎಸಿ, ಇನ್ನರ್ ವ್ಹೀಲ್ ಕ್ಲಬ್ ದಾಂಡೇಲಿ ಇವುಗಳ ಸಂಯುಕ್ತ ಆಶ್ರಯದಡಿ ಹಮ್ಮಿಕೊಂಡಿದ್ದ ಸೈನ್ಸ್ ಸಫಾರಿ 2023 ಹಬ್ಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ.ಬಿ.ಎಲ್.ಗುಂಡೂರು ಅವರು ವಿಜ್ಞಾನ ಲೋಕದ ಅವಲೋಕನವೆ ಸೈನ್ಸ್ ಸಫಾರಿ. ಈ ಕಾರ್ಯಕ್ರಮ ವಿದ್ಯಾರ್ಥಿಗಳ ಮನೋಮಟ್ಟವನ್ನು ವೃದ್ಧಿಸಲು ಸಹಕಾರಿಯಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಇನ್ನರ್ ವ್ಹೀಲ್ ಕ್ಲಬಿನ ಅಧ್ಯಕ್ಷೆ ರೇಷ್ಮಾ ಬಾವಾಜಿ ಮತ್ತು ಪ್ರಧಾನ ಕಾರ್ಯದರ್ಶಿ ಭಾವನಾ ಅಂಕೋಲೆಕರ್, ಕಾಲೇಜಿನ ಪ್ರಾಧ್ಯಾಪಕರುಗಳಾದ ಡಾ.ನಯನಾ ರೇವಣಕರ್, ಡಾ.ಪಿ.ಎ.ಹೊಸಮನಿ, ಡಾ.ವಿಜಯ್ ತೇಲಿ, ಡಾ.ಸುನೀಲ್ ರಾಥೋಡ್, ಡಾ.ಸಂಜಯ್ ಕುಮಾರ್.ಎಸ್.ಆರ್ ಅವರು ಭಾಗವಹಿಸಿ ಸಂದರ್ಭೋಚಿತವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ರಸಪ್ರಶ್ನೆ, ಸೆಮಿನಾರ್, ಟ್ರೇಸರ್ ಹಂಟ್, ಕಿರುನಾಟಕ, ಚರ್ಚಾ ಸ್ಪರ್ಧೆ, ನೃತ್ಯ ಮುಂತಾದ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸಂಜೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಜರುಗಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯ್ತು.ಎನ್.ಯು. ಸಹನಾ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಅನಿತಾ ವೆಲಿಪ್ ವಂದಿಸಿದರು. ಅಲೇಶಿಯಾ ಡಿಸೋಜಾ ಕಾರ್ಯಕ್ರಮವನ್ನು ನಿರೂಪಿಸಿದರು.