ಸಿದ್ದಾಪುರ: ಶಾಲು, ಹಾರ-ತುರಾಯಿ ಹಾಕಿ ಅಭಿನಂದಿಸುವ ಬದಲು ಕೆಲಸದ ಪತ್ರ ನೀಡಿ ಎಂದು ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ಕರೆ ನೀಡಿದರು.
ತಾಲೂಕಿನ ಹಾರ್ಸಿಕಟ್ಟಾ ಗ್ರಾಮ ಪಂಚಾಯ್ತಿ ಕಾಂಗ್ರೆಸ್ ಘಟಕದ ವತಿಯಿಂದ ನೀಡಲಾದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕನಾಗಿ ಆಯ್ಕೆಯಾಗುವಲ್ಲಿ ಎಲ್ಲರ ಸಹಕಾರ ತುಂಬಾ ಇದೆ. ಕ್ಷೇತ್ರದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹರಿಸುವುದು ನನ್ನ ಕರ್ತವ್ಯ. ನಿಮ್ಮ ವ್ಯಾಪ್ತಿಯಲ್ಲಿ ಇರುವ ಸಮಸ್ಯೆ ಹಾಗೂ ಕೆಲಸದ ಕುರಿತು ಗಮನಕ್ಕೆ ತರಬೇಕು. ಶಾಲು, ಹಾರ-ತುರಾಯಿ ಹಾಕಿ ಸನ್ಮಾನಿಸುವುದನ್ನು ಬಿಟ್ಟು ಕೆಲಸದ ಪತ್ರ ನೀಡಿ ಎಂದು ತಿಳಿಸಿದರು.
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎಸ್.ಆರ್.ಹೆಗಡೆ ಮಾತನಾಡಿ, ಶಾಸಕರಾದವರು ಕೇವಲ ಜನಪ್ರತಿನಿಧಿಯಾದರೆ ಸಾಲದು. ಜನರ ಕಷ್ಟನಷ್ಟಗಳಲ್ಲಿ ಭಾಗಿಯಾಗಬೇಕು. ಅದಕ್ಕೆ ಭೀಮಣ್ಣ ನಾಯ್ಕ ಸ್ಪಷ್ಟ ನಿದರ್ಶನ. ಕಷ್ಟದಲ್ಲಿರುವ ಜನರಿಗೆ ಸರ್ಕಾರದ ಪರಿಹಾರದ ಜತೆಗೆ ವೈಯಕ್ತಿಕವಾಗಿಯೂ ನೆರವು ನೀಡುತ್ತಿದ್ದಾರೆ ಎಂದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ಮಾಜಿ ಅಧ್ಯಕ್ಷ ಕೆ.ಜಿ.ನಾಗರಾಜ, ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ಲಾ ಹೆರೂರ, ಹಾರ್ಸಿಕಟ್ಟಾ ಘಟಕಾಧ್ಯಕ್ಷ ಕಮಲಾಕರ ನಾಯ್ಕ, ಪ್ರಮುಖರಾದ ವಿ.ಎನ್.ನಾಯ್ಕ, ಎನ್.ಟಿ.ನಾಯ್ಕ, ಪಾಂಡುರಂಗ ನಾಯ್ಕ, ಹಾರ್ಸಿಕಟ್ಟಾ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವಿದ್ಯಾ ನಾಯ್ಕ, ಸದಸ್ಯ ಅಶೋಕ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.