ಸಿದ್ದಾಪುರ: ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಉಯ್ಯಾಲೆಮನೆಯಲ್ಲಿ ನಿರ್ಮಿಸಲಾದ ತಾಲೂಕಿನ ಹಾರ್ಸಿಕಟ್ಟಾ ಗ್ರಾಮ ಪಂಚಾಯ್ತಿಯ ನೂತನ ಕಸ ವಿಲೇವಾರಿ ಘಟಕಕ್ಕೆ ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ಗುರುವಾರ ಚಾಲನೆ ನೀಡಿದರು.
ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಹಾರ್ಸಿಕಟ್ಟಾ ಗ್ರಾಮ ಪಂಚಾಯ್ತಿ ವತಿಯಿಂದ 9 ಲಕ್ಷ ರು ವೆಚ್ಚದಲ್ಲಿ ಘಟಕ ನಿರ್ಮಾಣ ಮಾಡಲಾಗಿದ್ದು, ಸಂಘವೊಂದಕ್ಕೆ ಕಸ ವಿಲೇವಾರಿ ಉಸ್ತುವಾರಿ ನೀಡಲಾಗಿದೆ.
ತ್ಯಾಜ್ಯ ವಿಲೇವಾರಿ ಘಟಕಕ್ಕೆ ಚಾಲನೆ ನೀಡಿದ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಮನಮೋಹನ್ ಸಿಂಗ್ ಪ್ರಧಾನಿಯಾಗಿರುವಾಗ ಜಾರಿಗೆ ಬಂದ ಉದ್ಯೋಗ ಖಾತ್ರಿ ಯೋಜನೆಯಿಂದ ಗ್ರಾಮೀಣ ಭಾಗದ ಅಭಿವೃದ್ಧಿ ಜತೆಗೆ ಬಡವರ ಆರ್ಥಿಕ ಸ್ವಾವಲಂಭನೆಗೆ ಸಹಕಾರಿಯಾಗುತ್ತಿದೆ. ಕೃಷಿ ಕ್ಷೇತ್ರಕ್ಕೂ ಇದರಿಂದ ತುಂಬಾ ಉಪಯೋಗವಾಗುತ್ತಿದೆ. ತ್ಯಾಜ್ಯ ವಿಲೇವಾರಿ ಘಟಕದ ಮೂಲಕ ಸ್ವಚ್ಚ ಹಾಗೂ ಸುಂದರ ಪರಿಸರಕ್ಕೆ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಸಾರ್ವಜನಿಕರು ಕೈಜೋಡಿಸಬೇಕು ಎಂದರು.
ಈ ವೇಳೆ ಹಾರ್ಸಿಕಟ್ಟಾ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವಿದ್ಯಾ ನಾಯ್ಕ, ಉಪಾಧ್ಯಕ್ಷ ಶಾಂತಕುಮಾರ ಪಾಟೀಲ್, ತಾಲೂಕಾ ಪಂಚಾಯ್ತಿ ಇಓ ದೇವರಾಜ ಹಿತಲಕೊಪ್ಪ, ಸದಸ್ಯರಾದ ಅಶೋಕ ನಾಯ್ಕ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ರಾಜೇಶ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.