ದಾಂಡೇಲಿ : ನಗರ ಸಭೆಯಲ್ಲಿ ಕಳೆದ 30 ವರ್ಷಗಳಿಗಿಂತಲೂ ಹೆಚ್ಚು ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತರಾದ ಇಬ್ಬರು ಸಿಬ್ಬಂದಿಗಳಿಗೆ ನಗರ ಸಭೆಯ ವತಿಯಿಂದ ಗೌರವ ಸನ್ಮಾನದೊಂದಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ನಗರ ಸಭೆಯ ನೀರು ಸರಬರಾಜು ವಿಭಾಗದಲ್ಲಿ ಕಳೆದ ಮೂವತ್ತು ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತರಾದ ಮಂಜುನಾಥ ನಾಯ್ಕ ಮತ್ತು ರುದ್ರಭೂಮಿ ಕಾವಲುಗಾರರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಸಣ್ಣ ವೀರಭದ್ರ ಪುಲ್ಲಯ್ಯ ಹರಿಜನ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಿ, ಬೀಳ್ಕೊಡಲಾಯ್ತು.
ಈ ಇಬ್ಬರ ಸೇವೆಯನ್ನು ಪೌರಾಯುಕ್ತರಾದ ಆರ್.ಎಸ್.ಪವಾರ್ ಕೊಂಡಾಡಿ, ನಿವೃತ್ತ ಜೀವನವು ಸುಖಕರವಾಗಿರೆಂದು ಶುಭವನ್ನು ಹಾರೈಸಿದರು.
ಸನ್ಮಾನಕ್ಕೆ ಕೃತಜ್ಷತೆ ಸಲ್ಲಿಸಿ ಮಾತನಾಡಿದ ಮಂಜುನಾಥ್ ನಾಯ್ಕ ಮತ್ತು ಸಣ್ಣ ವೀರಭದ್ರ ಅವರು ನಮಗೆ ಇಷ್ಟು ವರ್ಷಗಳವರೆಗೆ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಿದ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸಿ, ಮುಂದಿನ ದಿನಗಳಲ್ಲಿಯೂ ನಿಮ್ಮೆಲ್ಲರ ಪ್ರೀತಿ, ವಾತ್ಸಲ್ಯ ಸದಾ ಇರಲೆಂದರು.
ವೇದಿಕೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನಿಲ್ ನಾಯ್ಕರ್, ನಗರ ಸಭೆಯ ಹಿರಿಯ ಸದಸ್ಯೆ ಯಾಸ್ಮಿನ್ ಕಿತ್ತೂರು, ನಗರ ಸಭೆಯ ವ್ಯವಸ್ಥಾಪಕರಾದ ಪರಶುರಾಮ ಶಿಂಧೆ, ಸ್ಥಳೀಯ ಸಂಸ್ಥೆಗಳ ನೌಕರರ ಸಂಘದ ಅಧ್ಯಕ್ಷರಾದ ಮೈಕಲ್ ಫರ್ನಾಂಡಿಸ್ ಮತ್ತು ಸಂಘದ ಪದಾಧಿಕಾರಿಗಳಾದ ಬಾಳು ಗವಸ್, ಶ್ರೀನಿವಾಸ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನಗರ ಸಭೆಯ ಸದಸ್ಯರು, ನಗರ ಸಭೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.