ರಕ್ತದಾನ ಶ್ರೇಷ್ಠದಾನ: ಮಂಜುನಾಥ್ ಹರಿಕಂತ್ರ

ಅಂಕೋಲಾ : ಮನುಷ್ಯನಿಗೆ ರಕ್ತವನ್ನು ಮರ-ಗಿಡಗಳು ಪ್ರಾಣಿ-ಪಕ್ಷಿಗಳು ಕೊಡಲು ಸಾಧ್ಯವಿಲ್ಲ ಅಲ್ಲದೇ ಯಾವುದೇ ಪ್ರಯೋಗಾಲಯದಲ್ಲಿ ಸಹ ಉತ್ಪಾದಿಸಲು ಸಾಧ್ಯವಿಲ್ಲ ಆದ್ದರಿಂದ ದಾನಗಳಲ್ಲಿ ಶ್ರೇಷ್ಠದಾನ ರಕ್ತದಾನ ಎಂದು ಲಯನ್ಸ್ ಕ್ಲಬ್ ಅಂಕೋಲಾ ಕರಾವಳಿಯ ಅಧ್ಯಕ್ಷರಾದ ಮಂಜುನಾಥ ಹರಿಕಂತ್ರ ಹೇಳಿದರು.
ಅವರು ಕೆ.ಎಲ್. ಇ ಸಂಸ್ಥೆ ಬೆಳಗಾವಿಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರ 76ನೇ ಜನ್ಮದಿನಾಚರಣೆ ಪ್ರಯುಕ್ತ ಕೆ.ಎಲ್.ಇ ಸಂಘ-ಸಂಸ್ಥೆಗಳು, ಕಾರವಾರ ರಕ್ತನಿಧಿ ಕೇಂದ್ರ, ಲಯನ್ಸ್ ಕ್ಲಬ್ ಅಂಕೋಲಾ ಕರಾವಳಿ ಹಾಗೂ ಎಲ್.ಐ.ಸಿ ಪ್ರತಿನಿಧಿಗಳ ಒಕ್ಕೂಟ ಕುಮಟಾ ಮತ್ತು ಅಂಕೋಲಾದ ಸಹಯೋಗದಲ್ಲಿ ನಡೆದ ಏಳನೇ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಅತಿಥಿಗಳಾಗಿ ಆಗಮಿಸಿದ ಎಲ್.ಐ.ಸಿ ಪ್ರತಿನಿಧಿಗಳ ಒಕ್ಕೂಟ ಸಲಹೆಗಾರ ಗಣೇಶ ನಾಯ್ಕ , ರಕ್ತನಿಧಿ ಕೇಂದ್ರದ ಮುಖ್ಯಾಧಿಕಾರಿಗಳಾದ ಡಾ ಸುಪ್ರಿಯಾ ಸಾವಂತ ರಕ್ತದಾನದಿಂದ ಆಗುವ ಪ್ರಯೋಜನಗಳ ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಎಲ್.ಇ ಸ್ಥಳೀಯ ಸಂಘ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ ಡಿ .ಎಲ್.ಭಟ್ಕಳರವರು ರಕ್ತದಾನ ಶಿಬಿರದಂತಹ ಕಾರ್ಯಕ್ರಮಗಳ ಮೂಲಕ ಅಗತ್ಯ ಇರುವವರಿಗೆ ರಕ್ತ ನೀಡುವ ಕೆಲಸವಾಗಬೇಕು. ರಕ್ತವನ್ನು 3 ಭಾಗಗಳಾಗಿ ಮಾಡಿ ಅಗತ್ಯ ಅಂಶ ಕೊಡುವ ಮೂಲಕ ಒಬ್ಬನಿಂದ ಮೂರು ಜನರಿಗೆ ಪ್ರಯೋಜನವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಬಿ.ಇಡಿ ಪ್ರಾಚಾರ್ಯರಾದ ಡಾ ವಿನಾಯಕ ಹೆಗಡೆ ಸ್ವಾಗತಿಸಿ ನಿರೂಪಿಸಿದರು.ನರ್ಸಿಂಗ್ ಪ್ರಾಚಾರ್ಯ ಡಾ ಗಂಗಾಧರ ಇಸರಣ್ಣವರ ವಂದಿಸಿದರು.ಇದೇ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ನ ಡಾ ಕರುಣಾಕರ ನಾಯ್ಕ್ 18ನೇ ಬಾರಿ, ಪ್ರಾಚಾರ್ಯ ಡಾ ವಿನಾಯಕ ಹೆಗಡೆ 12ನೇ ಬಾರಿ ಹಾಗೂ ಇನ್ನಿತರೆ ಪ್ರಮುಖರಾದ ಪ್ರಾಚಾರ್ಯರು,ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ರಕ್ತದಾನ ಮಾಡಿದರು.