ದಾಂಡೇಲಿ : ಮಹಿಳೆಯರಿಗೆ ಸಾರಿಗೆ ಬಸ್ಸಿನಲ್ಲಿ ಉಚಿತ ಪ್ರಯಾಣದ ಸೌಲಭ್ಯ ದೊರೆತ ನಂತರ ಖಾಸಗಿ ಪ್ರಯಾಣಿಕ ವಾಹನಗಳಿಗೆ ಬಾಡಿಗೆ ಸಿಗದೇ ಖಾಸಗಿ ಪ್ರಯಾಣಿಕ ವಾಹನಗಳನ್ನೆ ನಂಬಿ ಬದುಕು ಕಟ್ಟಿಕೊಂಡಿರುವ ಖಾಸಗಿ ಪ್ರಯಾಣಿಕ ವಾಹನಗಳ ಚಾಲಕರ ಬದುಕು ಅತಂತ್ರವಾಗಿದ್ದು, ಈ ನಿಟ್ಟಿನಲ್ಲಿ ಸಂಕಷ್ಟದಲ್ಲಿರುವ ಖಾಸಗಿ ಪ್ರಯಾಣಿಕ ವಾಹನಗಳ ಚಾಲಕರಿಗೆ ಅಗತ್ಯ ಸೌಲಭ್ಯವನ್ನು ಒದಗಿಸಿಕೊಡುವಂತೆ ಆಗ್ರಹಿಸಿ ರಾಜ್ಯದ ಸಾರಿಗೆ ಸಚಿವರಿಗೆ ಬರೆದ ವಿವಿಧ ಅಗತ್ಯ ಬೇಡಿಕೆಗಳ ಮನವಿಯನ್ನು ತಹಶೀಲ್ದಾರ್ ಕಚೇರಿ ಮತ್ತು ನಗರದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಯವರ ಮೂಲಕ ಕರ್ನಾಟಕ ಚಾಲಕರ ಒಕ್ಕೂಟದ ದಾಂಡೇಲಿ ತಾಲ್ಲೂಕು ಘಟಕದಿಂದ ಮಂಗಳವಾರ ಮನವಿ ನೀಡಲಾಯ್ತು.
ಮನವಿಯಲ್ಲಿ ರಾಜ್ಯದಿಂದ ನೆರೆ ರಾಜ್ಯಗಳಿಗೆ ಹೋಗುವ ಖಾಸಗಿ ಪ್ರಯಾಣಿಕ ವಾಹನಗಳಿಗೆ ಹೆಚ್ಚುವರಿ ತಾತ್ಕಾಲಿಕ ಅನುಮತಿ ಶುಲ್ಕದ ಮೊತ್ತವನ್ನು ಕಡಿಮೆ ಮಾಡುವಂತೆ ನೆರೆ ರಾಜ್ಯದ ಸಾರಿಗೆ ಸಚಿವರಿಗೆ ಮನವರಿಕೆ ಮಾಡಬೇಕು. ಅಲ್ ಇಂಡಿಯಾ ಪರವಾನಿಗೆಯನ್ನು ಪಡೆಯಲು ಜಿಲ್ಲೆಯಲ್ಲಿ ಪರವಾನಿಗೆ ಕೇಂದ್ರವನ್ನು ಸ್ಥಾಪಿಸಬೇಕು. ಚಾಲಕರ ಕಾರ್ಮಿಕರ ಅಪಘಾತ ವಿಮೆಯನ್ನು ಹತ್ತು ಲಕ್ಷ ರೂಪಾಯಿಗೆ ವಿಸ್ತರಿಸಬೇಕು. ಖಾಸಗಿ ಪ್ರಯಾಣಿಕ ವಾಹನಗಳ ಚಾಲಕರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು. ಖಾಸಗಿ ಪ್ರಯಾಣಿಕ ವಾಹನಗಳಿಗೆ ಒಂದೆ ಬಾರಿ ತೆರಿಗೆಯನ್ನು ವಿಧಿಸಲು ಕ್ರಮ ಕೈಗೊಳ್ಳಬೇಕು ಹೀಗೆ ಮೊದಲಾದ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ವಿನಂತಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷರಾದ ರಮೇಶ್ ಭಂಡಾರಿ, ಅಧ್ಯಕ್ಷರಾದ ಅರುಣ್ ಕುಮಾರ್ ಆನಂದ್, ಸಂಘದ ಪದಾಧಿಕಾರಿಗಳಾದ ಇಲಿಯಾಸ್, ಪ್ರಶಾಂತ್. ಎನ್.ತಾನೇಕರ್, ಅಜೀತ್, ಪರಮೋದ್ ಮಿರ್ಜನಕರ್ ಹಾಗೂ ಸಂಘದ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.