ಅರಣ್ಯ ಸಚಿವ ಈಶ್ವರ ಖಂಡ್ರೆ ತರಾತುರಿಯಲ್ಲಿ ಡಾ ಕೆ. ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸುವ ಬಗ್ಗೆ ತೀರ್ಮಾನಿಸಿರುವುದನ್ನು ತೀವ್ರವಾಗಿ ವಿರೋಧಿಸುತ್ತೇನೆ- ಶಿವರಾಮ ಹೆಬ್ಬಾರ್

ಯಲ್ಲಾಪುರ: ಅರಣ್ಯ ಸಚಿವ ಈಶ್ವರ ಖಂಡ್ರೆ ತರಾತುರಿಯಲ್ಲಿ ಡಾ ಕೆ. ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸುವ ಬಗ್ಗೆ ತೀರ್ಮಾನಿಸಿರುವುದನ್ನು ನಾನು ಅತ್ಯಂತ ತೀವ್ರವಾಗಿ ವಿರೋಧಿಸುತ್ತೇನೆ. ಈ ವರದಿ ಜಾರಿಯಿಂದ ಪಶ್ಚಿಮ ಘಟ್ಟಗಳನ್ನು ಒಳಗೊಂಡ 10 ಜಿಲ್ಲೆಗಳ ಅಭಿವೃದ್ಧಿಯ ಹಾಗೂ ಪ್ರವಾಸೋದ್ಯಮದ ಮೇಲೆ ಅಗಾಧ ದುಷ್ಪರಿಣಾಮ ಬೀರಲಿದೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.
ಅವರು ಈ ಕುರಿತು ಪತ್ರಿಕಾ ಹೇಳಿಕೆ ನೀಡಿ, ಅರಣ್ಯ ಸಚಿವರು ವರದಿಯ ಕುರಿತು ಸಂಪೂರ್ಣ ಅಧ್ಯಯನ ಮಾಡಿಕೊಳ್ಳಬೇಕು. ಮಲೆನಾಡಿನ ಪ್ರದೇಶದಿಂದ ಬಂದಿರುವ ನಮಗೂ ಅರಣ್ಯ ರಕ್ಷಣೆಯ ಬಗ್ಗೆ ಅತೀವ ಪ್ರೀತಿ ಹಾಗೂ ಕಾಳಜಿ ಇದೆ. ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಬದುಕು ಕಟ್ಟಕೊಂಡಿರುವ ಅನೇಕ ಬುಡಕಟ್ಟು ಜನಾಂಗಗಳ ಸಾಂಸ್ಕೃತಿಕ ಪರಂಪರೆಗಳು ಈ ವರದಿ ಜಾರಿಯಿಂದ ನಶಿಸಿಹೋಗಲಿದೆ.
ಸಹಸ್ರಾರು ಬಡ ಕುಟುಂಬಗಳ ಜೀವನವನ್ನು ಸರ್ವನಾಶ ಮಾಡುವ ಈ ವರದಿಯನ್ನು ತರಾತುರಿಯಲ್ಲಿ ಜಾರಿಗೊಳಿಸದೇ ಪಶ್ಚಿಮಘಟ್ಟಗಳನ್ನು ಒಳಗೊಂಡಿರುವ ಪ್ರದೇಶಗಳ ಶಾಸಕರು ಹಾಗೂ ಸಂಸದರೊಂದಿಗೆ ಈ ವರದಿಯ ಸಾಧಕ – ಭಾಧಕಗಳ ಕುರಿತು ವಿಸ್ತ್ರತವಾಗಿ ಚರ್ಚಿಸಿ ಮುಂದಿನ ನಿರ್ಧಾರವನ್ನು ಕೈಗೊಳ್ಳಬೇಕು. ಇಷ್ಟಾಗಿಯೂ ವರದಿಯನ್ನು ಜಾರಿಗೊಳಿಸುವುದಾದಲ್ಲಿ ಎಲ್ಲಾ ಹೋರಾಟಕ್ಕೆ ನಾವು ಸಿದ್ಧವಾಗಿದ್ದು, ಶಾಸಕರು ಹಾಗೂ ಸಂಸದರ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮುಂದಿನ ನಿರ್ಧಾರವನ್ನು ಕೈಗೊಳ್ಳಲಿದ್ದೇವೆ ಎಂದರು.