ಯಲ್ಲಾಪುರ: ತಾಲೂಕಿನ ಕೋಳಿಕೇರಿಯಲ್ಲಿ ಬಸ್ ನಿಲುಗಡೆ ಮಾಡಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಘಟಕ ವ್ಯವಸ್ಥಾಪಕರು ಹಾಗೂ ತಹಸೀಲ್ದಾರರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಸಲ್ಲಿಸಿದ ಮನವಿಯಲ್ಲಿ ಯಲ್ಲಾಪುರದಿಂದ 11 ಕಿಮೀ ದೂರದಲ್ಲಿರುವ ಕೋಳಿಕೇರಿ ಗ್ರಾಮ 800 ಜನಸಂಖ್ಯೆ ಹೊಂದಿದ್ದು,100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿನಿತ್ಯ ಶಾಲೆ, ಕಾಲೇಜುಗಳಿಗೆ ಹೋಗುತ್ತಾರೆ. ಗ್ರಾಮಸ್ಥರು ಬೇರೆ ಬೇರೆ ಕೆಲಸ ಕಾರ್ಯಗಳಿಗೆ ಯಲ್ಲಾಪುರ, ಹುಬ್ಬಳ್ಳಿ ಭಾಗಕ್ಕೆ ಓಡಾಡುತ್ತಾರೆ. ಆದರೆ ಹೆದ್ದಾರಿಯಲ್ಲಿ ಸಂಚರಿಸುವ ಎಕ್ಸ್ ಪ್ರೆಸ್ ಬಸ್ ಗಳು ನಿಲುಗಡೆ ಇಲ್ಲದೇ ಇರುವುದರಿಂದ ಪ್ರಯಾಣಿಕರು ಪ್ರತಿನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ.
ಕಾರಣ ಶೀಘ್ರದಲ್ಲಿ ಬೇಡಿಕೆ ಈಡೇರಿಸದಿದ್ದರೆ ಜು.26 ರಂದು ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಸಿದರು.
ವಡೆಹುಕ್ಕಳಿ-ಲಾಲಗುಳಿಗೆ ಬೆಳಗ್ಗೆ 8 ಕ್ಕೆ ಬಿಡುತ್ತಿದ್ದ ಬಸ್ ಕೊರೊನಾ ನಂತರ ಸ್ಥಗಿತಗೊಳಿಸಲಾಗಿದೆ. ಇದರಿಂದ ಗ್ರಾಮಸ್ಥರು, ವಿದ್ಯಾರ್ಥಿಗಳು, ಶಿಕ್ಷಕರಿಗೆ ತೊಂದರೆಯಾಗಿದೆ. ಈ ಬಸ್ ಪುನರಾರಂಭಿಸಬೇಕೆಂದು ಒತ್ತಾಯಿಸಿದರು.
ತಾ.ಪಂ ಮಾಜಿ ಅಧ್ಯಕ್ಷ ರವಿ ಕೈಟ್ಕರ್, ಕಣ್ಣಿಗೇರಿ ಗ್ರಾ.ಪಂ ಸದಸ್ಯರಾದ ನಾಗೇಶ ಗಾವಡೆ, ಲಕ್ಷ್ಮೀ ಪಾಟೀಲ, ಗ್ರಾಮಸ್ಥ ಸಂದೀಪ ಗಾವಡೆ ಮುಂತಾದವರಿದ್ದರು.