ಕಲಬುರಗಿ: 12 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿರುವ ದುರಂತ ಘಟನೆ ಕಲಬುರಗಿ ಜಿಲ್ಲೆಯ ಆಳಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಂದು (ಜುಲೈ 18) ಘಟನೆ ಬೆಳಕಿಗೆ ಬಂದಿದ್ದು ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
12 ವರ್ಷದ ಬಾಲಕಿ ಜುಲೈ 15 ರಂದು ತನ್ನ ಮನೆಯಿಂದ ಹೊರಟು, ಹತ್ತಿರದಲ್ಲಿ ವಾಸಿಸುತ್ತಿರುವ ತಮ್ಮ ಸಂಬಂಧಿಕರ ಮನೆಗೆ ಹೋಗುವುದಾಗಿ ಹೇಳಿ ಹೊರಟಿದ್ದಳು. ಆದ್ರೆ ಎರಡು ಮೂರು ದಿನ ಕಳೆದರೂ ಬಾಲಕಿ ಸಿಕ್ಕಿಲ್ಲ. ಹೀಗಾಗಿ ಮನೆಯವರೆಲ್ಲ ಹುಡುಕಾಡಿದ್ದಾರೆ. ಇಂದು (ಜುಲೈ 18) ಗ್ರಾಮದ ಹೊರವಲಯದ ಬಾವಿಯಲ್ಲಿ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ. ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿ ಬಾವಿಯಲ್ಲಿ ಎಸೆದಿರುವ ಶಂಕೆ ವ್ಯಕ್ತವಾಗಿದೆ.
ಆರೋಪಿಯ ಗುರುತು ಪತ್ತೆಯಾಗಿಲ್ಲ. ಪೊಲೀಸರು ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದಾರೆ. ಸದ್ಯ ಆಳಂದ ಪೊಲೀಸ್ ಠಾಣೆಯಲ್ಲಿ ಪೋಸ್ಕೋ ಪ್ರಕರಣ ದಾಖಲಾಗಿದ್ದು ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.