ಯಲ್ಲಾಪುರ: ಸೋಮವಾರವೂ ಮುಂದುವರೆದ ಜೋರಾದ ಗಾಳಿ, ಮಳೆ

ಯಲ್ಲಾಪುರ: ತಾಲೂಕಿನಲ್ಲಿ ಜೋರಾದ ಗಾಳಿ, ಮಳೆ ಸೋಮವಾರವೂ ಮುಂದುವರಿದಿದ್ದು, ವಿವಿಧೆಡೆ ಹಾನಿ ಉಂಟಾಗಿದೆ. ಸೋಮವಾರ 173.6 ಮಿಮೀ ಮಳೆಯಾಗಿದ್ದು, ಈವರೆಗೆ 1366.8 ಮೀಮೀ ಮಳೆಯಾಗಿದೆ.
ಜೋರಾದ ಗಾಳಿಯ ಪರಿಣಾಮ ರಾಷ್ಟ್ರೀಯ ಹೆದ್ದಾರಿ 63 ರ ಮೇಲೆ ಅರಬೈಲ್ ಘಟ್ಟದಲ್ಲಿ ಮರವೊಂದು ಉರುಳಿ ಬಿದ್ದಿತ್ತು. ಇದರಿಂದ ಕೆಲಕಾಲ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು. ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ವಜ್ರಳ್ಳಿ ಗ್ರಾ.ಪಂ ವ್ಯಾಪ್ತಿಯ ತೇಲಂಗಾರದ ಹೆಗ್ಗಾರಗದ್ದೆ-ಮತ್ತಿಹಕ್ಕಲ ರಸ್ತೆಗೆ ಹಳ್ಳ ನುಗ್ಗಿದ್ದು, 5 ದಿನಗಳಿಂದ ಸಂಪರ್ಕ ಕಡಿತಗೊಂಡಿದೆ. ಸಮೀಪದ ಮನೆ, ತೋಟ, ಗದ್ದೆಗಳಿಗೆ ನೀರು ನುಗ್ಗಿದೆ. ಬಾಗಿನಕಟ್ಟಾದ ಶ್ರೀಮತಿ ತಿಮ್ಮಣ್ಣ ಕೋಮಾರ ಅವರ ತೋಟಕ್ಕೆ ಹಳ್ಳ ನುಗ್ಗಿ ಅಪಾರ ಪ್ರಮಾಣದ ಅಡಕೆ ಮರಗಳು ಹಳ್ಳದ ಪಾಲಾಗಿದೆ. ಇದರಿಂದ ಅಪಾರ ನಷ್ಟ ಉಂಟಾಗಿದೆ.