ಯಲ್ಲಾಪುರ: ತಾಲೂಕಿನಾದ್ಯಂತ ಸತತವಾಗಿ ಮುಂದುವರೆದ ಗಾಳಿ, ಮಳೆ

ಯಲ್ಲಾಪುರ: ತಾಲೂಕಿನಾದ್ಯಂತ ಸತತವಾಗಿ ಗಾಳಿ, ಮಳೆ ಮುಂದುವರಿದಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದೆ. ಭಾನುವಾರವೂ ಮಳೆಯ ಆರ್ಭಟ ಮುಂದುವರಿದಿದೆ. ಜೋರಾದ ಮಳೆಯಿಂದಾಗಿ ಬೇಡ್ತಿ ನದಿ ತುಂಬಿ ಹರಿಯುತ್ತಿದೆ.
ಮಾಗೋಡ ರಸ್ತೆಯಲ್ಲಿ ಕಾಳಿಮನೆ ಕ್ರಾಸ್ ಬಳಿ 2-3 ಅಡಿ ನೀರು ನಿಂತಿದ್ದು, ವಾಹನ ಸವಾರರು ಸಂಚಾರಕ್ಕೆ ಸಮಸ್ಯೆ ಎದುರಿಸುವಂತಾಗಿದೆ. ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಓಡಾಡುವುದು ಕಷ್ಟವಾಗಿದೆ.
ಭಾನುವಾರ ವಾರದ ಸಂತೆ ಬೆಲ್ ರಸ್ತೆಯುದ್ದಕ್ಕೂ ನಡೆಯುತ್ತಿದ್ದು, ಮಳೆ ಸಂತೆಯ ವಹಿವಾಟಿಗೆ ಅಡ್ಡಿಯಾಯಿತು. ತರಕಾರಿಗಳ ದುಬಾರಿ ಧಾರಣೆ ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ. ಅದರೊಂದಿಗೆ ಮಳೆಯ ನಡುವೆಯೇ ತರಕಾರಿ ವ್ಯಾಪಾರ ನಡೆದಿದ್ದು, ರಸ್ತೆಯ ಪಕ್ಕದ ಗಟಾರ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಇದು ಜನರ ಓಡಾಕ್ಕೂ ವ್ಯಾಪಾರ ವಹಿವಾಟಿಗೂ ತೊಂದರೆಯಾಯಿತು.
ವಿಶೇಷವಾಗಿ ತರಕಾರಿ ವ್ಯಾಪಾರಸ್ಥರಿಗೆ ಮಳೆನೀರಲ್ಲಿ ತರಕಾರಿ ಕೊಚ್ಚಿ ಹೋಗದಂತೆ ನಿಗಾ ವಹಿಸುವುದೇ ದೊಡ್ಡ ಸಾಹಸವಾಯಿತು. ನಿಂತುಕೊಂಡೇ ತರಕಾರಿ ಮಾರಾಟ ಮಾಡಬೇಕಾದ ಸ್ಥಿತಿ ಉಂಟಾಯಿತು. ಮಳೆಯ ಅಬ್ಬರ ಪರ ಊರಿನಿಂದ ಬರುವ ವ್ಯಾಪಾರಸ್ಥರು ಮಳೆ,ಚರಂಡಿ ನೀರಿನ ಕಿರಿಕಿರಿ ಬಗ್ಗೆ ಶಪಿಸಿದರು.

ಶಾಲೆಗಳಿಗೆ ರಜೆ:
ಭಾರಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ ಎಂದು ತಹಸೀಲ್ದಾರ ಶ್ರೀಕೃಷ್ಣ ಕಾಮ್ಕರ ತಿಳಿಸಿದ್ದಾರೆ.