ಗೊಂದಲದ ಗೂಡಾದ ,ಯಲ್ಲಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು

ಯಲ್ಲಾಪುರ:
ಯಲ್ಲಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗೊಂದಲದ ಗೂಡಾಗಿದ್ದು, ಉಪನ್ಯಾಸಕರ ನಡುವಿನ ಆಂತರಿಕ ಕಲಹ, ವಿದ್ಯಾರ್ಥಿಗಳಲ್ಲಿನ ಗುಂಪುಗಾರಿಕೆ ತಾರಕಕ್ಕೇರಿ ಠಾಣೆಯ ಮೆಟ್ಟಿಲೇರಿದೆ.
ಕಾಲೇಜಿನ ಉಪನ್ಯಾಸಕರೊಬ್ಬರ ತೇಜೋವಧೆ ಮಾಡುವಂತಹ ವರದಿಯೊಂದು ಸ್ಥಳೀಯ ಆನ್ಲೈನ್ ನ್ಯೂಸ್ ನಲ್ಲಿ ಪ್ರಕಟವಾಗಿದ್ದು, ಅದರ ವಿರುದ್ಧ ಆಕ್ರೋಶಗೊಂಡ ವಿದ್ಯಾರ್ಥಿಗಳು, ವಿದ್ಯಾರ್ಥಿ ಯೂನಿಯನ್ ನೇತೃತ್ವದಲ್ಲಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಅನಗತ್ಯವಾದ ಅಪಪ್ರಚಾರದ ಮೂಲಕ ಕಾಲೇಜಿನ ಹೆಸರು ಹಾಳು ಮಾಡಲಾಗುತ್ತಿದೆ. ಸಂಸ್ಥೆಯ ಪ್ರಗತಿ ಪಥವನ್ನು ಕುಂಠಿತಗೊಳಿಸುವ ಹುನ್ನಾರ ಇದಾಗಿದೆ. ಇಂತಹ ಷಡ್ಯಂತ್ರದ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಲಿಖಿತ ದೂರಿನ ಮೂಲಕ ಒತ್ತಾಯಿಸಿದ್ದಾರೆ.
ಇದೇ ವೇಳೆ ಕಾಲೇಜಿನಲ್ಲಿ ಹೈಡ್ರಾಮಾ ನಡೆದಿದ್ದು, ವಿದ್ಯಾರ್ಥಿಗಳ ಗುಂಪೊಂದು ಉಪನ್ಯಾಸಕರೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದರೆಂದು ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಹಲ್ಲೆ ನಡೆಸಲು ಯತ್ನಿಸಿದರೆಂದು ಹೇಳಲಾದ ವಿದ್ಯಾರ್ಥಿಗಳ ಗುಂಪು ಪೊಲೀಸ್ ಠಾಣೆಗೆ ಉಪನ್ಯಾಸಕರು ತಮ್ಮ ಮೇಲೆ ಹಲ್ಲೆಗೆ ಮುಂದಾಗಿದ್ದಾರೆಂದು ದೂರು ನೀಡಿದೆ. ಸಂಜೆ ವೇಳೆ ಆ ಉಪನ್ಯಾಸಕರೂ ಠಾಣೆಗೆ ಬಂದು, ವಿದ್ಯಾರ್ಥಿಗಳು ತಮಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಕುರಿತು ದೂರಿದ್ದಾರೆ.
ಒಟ್ಟಾರೆ ಕಾಲೇಜಿನಲ್ಲಿ ಉಪನ್ಯಾಸಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಎರಡು ಗುಂಪುಗಳಾಗಿದ್ದು, ಕಾಲೇಜುನ ಆವರಣದೊಳಗೆ ಮುಗಿಯಬೇಕಾಗಿದ್ದ ಪ್ರಕರಣ, ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.